ಮೈಸೂರು: “ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮೊದಲು ಅದನ್ನು ಸರಿಪಡಿಸಿ ರೈತರ ಹಾಗೂ ಜನರ ಹಿತಾಸಕ್ತಿ ಕಾಪಾಡುವಂತೆ” ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಗೆ ಮಾಜಿ ಸಚಿವ ಸಾ.ರಾ. ಮಹೇಶ್ ತಿಳಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಾ ರಾ ಮಹೇಶ್, “ರಾಜಕೀಯದಲ್ಲಿ ಪ್ರತಿಪಕ್ಷಗಳು ಆರೋಪ ಮಾಡುವುದು ಸಹಜ. ಅದಕ್ಕೆ ಸರ್ಕಾರ ಅಂಕಿ ಅಂಶಗಳ ಮೂಲಕ ಸ್ಪಷ್ಟನೆ ನೀಡಬೇಕೇ ಹೊರತು, ರಾಜಕೀಯ ಕೆಸರೆರಚಾಟ ಮಾಡಬಾರದು. ಕುಮಾರಸ್ವಾಮಿಯವರು ಅಂಕಿ ಅಂಶಗಳ ಸಮೇತ ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡಿದ್ದಾರೆ. ಅದಕ್ಕೆ ಡಿಕೆಶಿ ಅವರು ಉತ್ತರ ನೀಡುತ್ತಾರೆ. ಅದನ್ನು ಬಿಟ್ಟು ಕುಮಾರಸ್ವಾಮಿಯವರ ವಿರುದ್ಧ ಹೇಳಿಕೆ ನೀಡಲು ನೀವೇನು ಕಾಂಗ್ರೆಸ್ ವಕ್ತಾರರ ಅಥವಾ ಕಾಂಗ್ರೆಸ್ನಲ್ಲಿ ಇವರಿಬ್ಬರನ್ನು ಬಿಟ್ಟು ಬೇರೆ ನಾಯಕರೇ ಇಲ್ಲವಾ” ಎಂದು ಸಚಿವರುಗಳಾದ ಚಲುವರಾಯಸ್ವಾಮಿ ಹಾಗೂ ಬಾಲಕೃಷ್ಣರನ್ನು ಉಲ್ಲೇಖಿಸಿ ಮಾತನಾಡಿದರು.
“ಈ ಮೊದಲು ಇವರಿಬ್ಬರೂ ನಮ್ಮ ಜೆಡಿಎಸ್ ಪಕ್ಷದಲ್ಲೇ ಇದ್ದವರು. ಈಗ ಅಲ್ಲಿ ಹೋಗಿ ಮಂತ್ರಿಗಳಾದ ಮೇಲೆ ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಾರೆ. ಮಾತನಾಡುವ ಮೊದಲು ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಟೀಕೆಗಳು ಆರೋಗ್ಯಕರವಾಗಿರಬೇಕೇ ಹೊರತು, ವ್ಯಕ್ತಿಗತವಾಗಿರಬಾರದು. ಇಬ್ಬರಿಗೂ ಒಳ್ಳೆಯ ಖಾತೆ ಸಿಕ್ಕಿದೆ, ಅದರಿಂದ ರಾಜ್ಯದ ಜನರಿಗೆ ಹಾಗೂ ರೈತರಿಗೆ ಒಳ್ಳೆಯ ಕೆಲಸ ಮಾಡುವುದರ ಕಡೆ ಗಮನಹರಿಸಿ” ಎಂದು ಚಲುವರಾಯಸ್ವಾಮಿ ಹಾಗೂ ಬಾಲಕೃಷ್ಣರನ್ನು ಮಾಜಿ ಸಚಿವ ಸಾ ರಾ ಮಹೇಶ್ ತರಾಟೆಗೆ ತೆಗೆದುಕೊಂಡರು.
ಹೌದು.. ಬಿಡದಿ ಟೌನ್ ಶಿಪ್ ಯೋಜನೆ ಕುಮಾರಸ್ವಾಮಿಯವರದ್ದೇ!: ಕುಮಾರಸ್ವಾಮಿಯವರು ಬಿಡದಿಯಲ್ಲಿ ಟೌನ್ ಶಿಪ್ ಮಾಡಬೇಕೆಂದು ಹೊರಟಿದ್ದು ನಿಜ. ಆದರೆ ಆಗಿನ ಸಂದರ್ಭದಲ್ಲಿ ರೈತರ ಭೂಮಿ ಫಲವತ್ತಾಗಿರಲಿಲ್ಲ, ಒಂದು ರೀತಿ ಬಂಜರಾಗಿತ್ತು. ಆಗ ಅಲ್ಲಿ ಟೌನ್ಶಿಪ್ ಮಾಡಲು ನಿರ್ಧರಿಸಿದ್ದರು. ಕಾಲಕ್ರಮೇಣ ಅಲ್ಲಿನ ಭೂಮಿ ಸಮೃದ್ಧವಾಗಿ ರೈತರು ಬೆಳೆ ಬೆಳೆಯಲು ಪ್ರಾರಂಭಿಸಿದ ಮೇಲೆ ಕುಮಾರಸ್ವಾಮಿಯವರು ಬಿಡದಿ ಟೌನ್ಶಿಪ್ ಯೋಜನೆ ಕೈಬಿಟ್ಟರು” ಎಂದು ಸಾ ರಾ ಮಹೇಶ್ ಸಮರ್ಥಿಸಿಕೊಂಡರು.
