ಮೈಸೂರು, ನವೆಂಬರ್ 5: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಆಕಳ ಗ್ರಾಮದ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಒಂದೇ ಪ್ರದೇಶದಲ್ಲಿ ನಾಲ್ಕು ಹುಲಿಗಳು ಓಡಾಡುತ್ತಿರುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಕಳ ಗ್ರಾಮದ ಸುತ್ತಮುತ್ತ ಹುಲಿಗಳ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಡ್ರೋನ್ ಕ್ಯಾಮರಾ ಬಳಸಿ ಹುಲಿಗಳ ಚಲನವಲನದ ಮೇಲೆ ನಿಗಾ ಇಡಲಾಗುತ್ತಿದ್ದು, ಹುಲಿಗಳನ್ನು ಸೆರೆಹಿಡಿಯಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದೇ ಪ್ರದೇಶದಲ್ಲಿ ಎರಡು ದಿನಗಳ ಹಿಂದಷ್ಟೇ ಹುಲಿಯೊಂದು ಪರಮೇಶ್ ಎಂಬುವವರ ಮೇಲೆ ದಾಳಿ ಮಾಡಿತ್ತು. ಅಲ್ಲದೆ, ನಿನ್ನೆ ಡೋರನಕಟ್ಟೆ ಕಾಲೋನಿಯಲ್ಲಿ ಮಹಿಳೆಯೊಬ್ಬರು ಹುಲಿ ದಾಳಿಯಲ್ಲಿ ಮೃತಪಟ್ಟಿದ್ದರು. ಸತತ ಹುಲಿ ದಾಳಿ ಘಟನೆಗಳ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಗ್ರಾಮಸ್ಥರು, ಹುಲಿಗಳನ್ನು ತಕ್ಷಣ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.
ಡ್ರೋನ್ ಮೂಲಕ ಹುಲಿಗಳ ಚಲನವಲನದ ಮೇಲೆ ನಿಗಾ
ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾದ ಮೊರೆ ಹೋಗಿದೆ. ಡ್ರೋನ್ ಕ್ಯಾಮರಾದಲ್ಲಿ ನಾಲ್ಕು ಹುಲಿಗಳ ಓಡಾಟದ ದೃಶ್ಯ ಸೆರೆಯಾಗಿದ್ದು, ಅವುಗಳ ಚಲನವಲನದ ಆಧಾರದ ಮೇಲೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಒಂದೇ ಪ್ರದೇಶದಲ್ಲಿ ನಾಲ್ಕು ಹುಲಿಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
