ಹುಣಸೂರು, ಜನವರಿ 27, 2026 : ತಾಲೂಕಿನ ಯಶೋಧರಪುರ ಗೇಟ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಮತ್ತು ಮಗು ಗಾಯಗೊಂಡಿರುವ ಘಟನೆ ನಡೆದಿದೆ.

ತಾಲೂಕಿನ ನಾಗಮಂಗಲ ಗ್ರಾಮದ ನಿವಾಸಿ ಜೀವನ್ ಎಂಬುವವರ ಪತ್ನಿ ಅಶ್ವಿನಿ (36) ಮೃತಪಟ್ಟ ದುರ್ದೈವಿ.ಜೀವನ್ ಅವರು ತಮ್ಮ ಪತ್ನಿ ಹಾಗೂ ಮೂರು ವರ್ಷದ ಮಗುವಿನೊಂದಿಗೆ ಬೈಕ್‌ನಲ್ಲಿ ಹುಣಸೂರು ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ, ಪಿರಿಯಾಪಟ್ಟಣ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಯಶೋಧರಪುರ ಗೇಟ್ ಬಳಿ ಇವರ ಬೈಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್‌ನ ಹಿಂಬದಿ ಕುಳಿತಿದ್ದ ಅಶ್ವಿನಿ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಜೀವನ್ ಹಾಗೂ ಮೂರು ವರ್ಷದ ಮಗುವಿಗೂ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
