ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಎಂದಿನಂತೆ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಸಂಸದ ಸುನಿಲ್ ಬೋಸ್ ಹಾಗೂ ಶಾಸಕ ಜಿ.ಡಿ. ರವಿಶಂಕರ್ ಸೇರಿದಂತೆ ಹಲವು ಗಣ್ಯರು ಸಿಎಂಗೆ ಈ ವೇಳೆ ಸಾಥ್ ನೀಡಿದರು. ಆದರೆ ಇದೇ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡದೆ ವಿಮಾನ ನಿಲ್ದಾಣದಿಂದ ಸಿಎಂ ಸಿದ್ದರಾಮಯ್ಯ ಹೊರಟಿದ್ದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪ್ರತಿ ಬಾರಿ ಮೈಸೂರಿಗೆ ಆಗಮಿಸಿದಾಗಲೂ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನಂತರ ತಮ್ಮ ಮುಂದಿನ ಕಾರ್ಯಕ್ರಮಗಳಿಗೆ ತೆರಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿ ತಮ್ಮ ನಡೆಯಲ್ಲಿ ಬದಲಾವಣೆ ತಂದಿದ್ದಾರೆ.
ಇಂದು ಬೆಳಗ್ಗೆ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಅವರು, ಪೊಲೀಸರ ಗೌರವ ವಂದನೆ ಸ್ವೀಕರಿಸಿದರು. ನಂತರ ಅಲ್ಲಿ ಹಾಜರಿದ್ದ ಸಚಿವ ಮಹದೇವಪ್ಪ, ಸಂಸದ ಸುನಿಲ್ ಬೋಸ್ ಮತ್ತು ಶಾಸಕ ರವಿಶಂಕರ್ ಅವರೊಂದಿಗೆ ಮಾತುಕತೆ ನಡೆಸಿ, ತಕ್ಷಣವೇ ವಿಮಾನ ನಿಲ್ದಾಣದಿಂದ ಹೊರಟಿದ್ದಾರೆ.
ಮಾಧ್ಯಮಗಳಿಂದ ಅಂತರ:
ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಸಿಎಂ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದರು. ಆದರೆ, ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರಿಂದ ಅಂತರ ಕಾಯ್ದುಕೊಂಡು, ಯಾವುದೇ ಪ್ರತಿಕ್ರಿಯೆ ನೀಡದೆ ನೇರವಾಗಿ ತಮ್ಮ ವಾಹನದಲ್ಲಿ ತೆರಳಿದರು.
ರಾಜ್ಯ ರಾಜಕೀಯದಲ್ಲಿ ‘ನವೆಂಬರ್ ಕ್ರಾಂತಿ’ ಎಂದು ಹೇಳಲಾಗುತ್ತಿರುವ ಹತ್ತಿರವಾಗುತ್ತಿದ್ದಂತೆ, ಮುಖ್ಯಮಂತ್ರಿಗಳು ಮಾಧ್ಯಮಗಳಿಂದ ಹೀಗೆ ಅಂತರ ಕಾಯ್ದುಕೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಅವರ ಈ ನಡೆ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.
