ಮಂಡ್ಯ, ಜನವರಿ 17, 2026: ಸಂಭ್ರಮದಿಂದ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನೊಬ್ಬ, ಮದುವೆಗೆ ಇನ್ನು ಕೇವಲ ನಾಲ್ಕು ದಿನ ಬಾಕಿ ಇರುವಾಗಲೇ ಹೆಣವಾಗಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ.
ಮಾಯಪ್ಪನಹಳ್ಳಿಯ ಯೋಗೇಶ್ (30) ಕೊಲೆಯಾದ ದುರ್ದೈವಿ. ಇದೇ ಜನವರಿ 21ರಂದು ಯೋಗೇಶ್ ವಿವಾಹ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿತ್ತು, ಲಗ್ನ ಪತ್ರಿಕೆಯನ್ನು ಹಂಚಿ ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ, ತನ್ನನ್ನು ಕೊಲೆ ಮಾಡಿದ ಅಣ್ಣನ ಹೆಸರನ್ನು ಕೂಡ ಯೋಗೇಶ್ ಪ್ರೀತಿಯಿಂದ ಮದುವೆ ಕಾರ್ಡ್‌ನಲ್ಲಿ ಮುದ್ರಿಸಿದ್ದ.
ಹಲವು ವರ್ಷಗಳಿಂದ ಯೋಗೇಶ್ ಹಾಗೂ ಆತನ ಅಣ್ಣ ಲಿಂಗರಾಜು ನಡುವೆ ಆಸ್ತಿ ವಿಚಾರವಾಗಿ ತೀವ್ರ ಕಲಹ ನಡೆಯುತ್ತಿತ್ತು. ಇದೇ ಹಳೇ ದ್ವೇಷದ ಹಿನ್ನೆಲೆಯಲ್ಲಿ, ಅಣ್ಣ ಲಿಂಗರಾಜು ಹಾಗೂ ಆತನ ಮಕ್ಕಳಾದ ಭರತ್ ಮತ್ತು ದರ್ಶನ್ ಸೇರಿ ಯೋಗೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಮಾನವೀಯವಾಗಿ ಬರೋಬ್ಬರಿ 28 ಬಾರಿ ಚಾಕುವಿನಿಂದ ಇರಿದು ತಮ್ಮನನ್ನು ಹತ್ಯೆ ಮಾಡಿದ್ದಾರೆ.
ಹೊಸ ಜೀವನದ ಕನಸು ಕಾಣುತ್ತಿದ್ದ ಯುವಕ, ಅಣ್ಣನಿಂದಲೇ ಹತ್ಯೆಗೀಡಾಗಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಮದುವೆ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ.
