ಬೆಂಗಳೂರು, ಫೆಬ್ರವರಿ 13, 2026 : ಶಕ್ತಿ ಯೋಜನೆಯನ್ನು ಇನ್ನಷ್ಟು ಸಮರ್ಪಕವಾಗಿ ಸಮರ್ಪಕವಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಶಕ್ತಿ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಮುಂದಾಗಿದೆ.
ಕರ್ನಾಟಕ ಸಾರಿಗೆ ಬಸ್ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರತಿನಿತ್ಯ ಲಕ್ಷಾಂತರ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಈಗ ಆಧಾರ್ ಬದಲಿಗೆ ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನ ಮಾಡಿದೆ.
ಮಹಿಳೆಯರ ಉಚಿತ ಪ್ರಯಾಣಕ್ಕೆ 4 ಸಾರಿಗೆ ನಿಗಮಗಳು ಸ್ಮಾರ್ಟ್ಕಾರ್ಡ್ ವಿತರಿಸಲಿವೆ. ಶಕ್ತಿ ಸ್ಮಾರ್ಟ್ಕಾರ್ಡ್ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರೊಂದಿಗೆ, ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.
ಶಕ್ತಿ ಯೋಜನೆಯ ಪಾರದರ್ಶಕ ಅನುಷ್ಠಾನಕ್ಕಾಗಿ ಸ್ಮಾರ್ಟ್ ಕಾರ್ಡ್ ಅನುಷ್ಠಾನಗೊಳಿಸಲಾಗುವುದು. ಉಚಿತ ಸಂಚಾರಕ್ಕೆ ಮಹಿಳೆಯರಿಗೆ ಸ್ಮಾರ್ಟ್ ಕಾರ್ಟ್ ವಿತರಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿತ್ತು. ಆದರೆ, ಇದುವರೆಗೂ ಅದು ಅನುಷ್ಠಾನವಾಗಿರಲಿಲ್ಲ. ಇದು ಕಳೆದ ಬೆಳಗಾವಿ ಅಧಿವೇಶನ ಹಾಗೂ ಜಂಟಿ ಅಧಿವೇಶನದಲ್ಲಿ ಕೆಲ ಸದಸ್ಯರಿಂದ ಪ್ರಶ್ನೆಗೆ ಒಳಗಾಗಿತ್ತು.ಈ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ನಿಗಮಗಳ ಪರವಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಅನುಷ್ಠಾನಕ್ಕೆ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಸಿಸ್ಟಂ ಇಂಟಿಗ್ರೇಟರ್ ಆಯ್ಕೆಗೆ ಟೆಂಡರ್ ಆಹ್ವಾನಿಸಲು ಸರ್ಕಾರ ಮುಂದಾಗಿದೆ .
ಶಕ್ತಿ ಯೋಜನೆಯಡಿ ಇದೇ ಜನವರಿ ಅಂತ್ಯದವರೆಗೆ 660 ಕೋಟಿಗೂ ಹೆಚ್ಚು ಮಹಿಳೆಯತು ಉಚಿತವಾಗಿ ಪ್ರಯಾಣಿಸಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ಅಡಿ ಪ್ರತಿದಿನ ಸರಾಸರಿ 75.68 ಲಕ್ಷ ಮಹಿಳೆಯರು ಉಚಿತ ಬಸ್ ಸೇವೆ ಬಳಸುತ್ತಿದ್ದಾರೆ.
