ಮೈಸೂರು, ಡಿಸೆಂಬರ್ 29, 2025 : ಮೈಸೂರಿನ ಜಯಚಾಮರಾಜೇಂದ್ರ ವೃತ್ತದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಂಇಎಸ್ (MES) ವಿರುದ್ಧ ಭರ್ಜರಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪತ್ರಗಳನ್ನು ಹರಿದು ಹಾಕಿದ ಅವರು, ಕರ್ನಾಟಕದ ಹಿತದೃಷ್ಟಿಯಿಂದ ಎಂಇಎಸ್ ಅತ್ಯಂತ ಅಪಾಯಕಾರಿ ಸಂಘಟನೆಯಾಗಿದೆ ಎಂದು ಗುಡುಗಿದರು.
ಬೆಳಗಾವಿ ಮತ್ತು ಕನ್ನಡ ವಿರೋಧಿಯಾಗಿರುವ ಈ ಸಂಘಟನೆಯನ್ನು ರದ್ದು ಮಾಡದೆ ರಾಜಕಾರಣಿಗಳೇ ಬೆಳೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಂಬರುವ ಜನವರಿ 15ರಂದು ಬೆಳಗಾವಿಗೆ ತೆರಳಿ ಎಂಇಎಸ್ ಕಚೇರಿಗೆ ನುಗ್ಗಿ ನಾಮಫಲಕಗಳನ್ನು ಕಿತ್ತೆಸೆಯುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಅಧಿವೇಶನವು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು ಕೇವಲ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ರಾಜಣ್ಣ ಬೆಂಬಲಿಗರ ಊಟೋಪಚಾರಕ್ಕೆ ಸೀಮಿತವಾಗಿತ್ತು ಎಂದು ಟೀಕಿಸಿದರು. ಅಧಿವೇಶನ ಸಂಪೂರ್ಣ ವಿಫಲವಾಗಿದ್ದು, ರಾಜ್ಯವನ್ನು ಎರಡು ಭಾಗ ಮಾಡುವ ಬಗ್ಗೆ ಮಾತನಾಡುವ ಶಾಸಕರ ವಿರುದ್ಧ ಕಠಿಣ ಹೋರಾಟ ಮಾಡಲಾಗುವುದು ಮತ್ತು ಕರ್ನಾಟಕದ ವಿಭಜನೆಗೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟದ ಬಗ್ಗೆಯೂ ಧ್ವನಿ ಎತ್ತಿದ ಅವರು, ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ತಲಾ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಮೈಸೂರು ಮತ್ತು ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ಡ್ರಗ್ಸ್ ಫ್ಯಾಕ್ಟರಿಗಳನ್ನು ಪತ್ತೆ ಹಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.
