ಮೈಸೂರು, ನವೆಂಬರ್ 15, 2025 : ಭಾರತದ ಉಕ್ಕಿನ ಮನುಷ್ಯ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದು ‘ಏಕತೆಗಾಗಿ ನಡಿಗೆ’ (Run for Unity) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಮೈಸೂರು-ಕೊಡಗು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು. ವಾಕಥಾನ್ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಿಂದ ಆರಂಭಗೊಂಡು ಮಹಾರಾಜ ಕಾಲೇಜು ಮೈದಾನದವರೆಗೆ ನಡೆಯಿತು. ಸಂಸದ ಯದುವೀರ್ ಒಡೆಯರ್ ಅವರು ನೂರಾರು ವಿದ್ಯಾರ್ಥಿಗಳ ಜೊತೆಯಲ್ಲಿ ಹೆಜ್ಜೆ ಹಾಕಿ ದೇಶದ ಏಕತೆ ಮತ್ತು ಸಮಗ್ರತೆಯ ಸಂದೇಶ ಸಾರಿದರು.
ಸರ್ದಾರ್ ಪಟೇಲ್ ಕೊಡುಗೆಗಳ ಸ್ಮರಣೆ:
ಈ ಸಂದರ್ಭದಲ್ಲಿ ಸಂಸದ ಯದುವೀರ್ ಒಡೆಯರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ದೇಶವನ್ನು ಒಗ್ಗೂಡಿಸುವಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ನೀಡಿದ ಅಮೂಲ್ಯ ಕೊಡುಗೆಗಳು ಹಾಗೂ ಅವರ ಜೀವನಾದರ್ಶಗಳ ಕುರಿತು ಮಾಹಿತಿ ಹಂಚಿಕೊಂಡರು. ದೇಶದಾದ್ಯಂತ ಸರ್ದಾರ್ ಪಟೇಲ್ ಅವರ ಸ್ಮರಣೆಗಾಗಿ ಇಂತಹ ನಡಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮೈಸೂರಿನಲ್ಲಿ ನಡೆದ ಈ ವಾಕಥಾನ್‌ನಲ್ಲಿ ನೂರಾರು ಯುವ ಸಮುದಾಯದವರು ಉತ್ಸಾಹದಿಂದ ಭಾಗವಹಿಸಿದ್ದರು.
