ಮೈಸೂರು , ಡಿಸೆಂಬರ್ 16, 2025 : ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಸರ್ಕಾರ ಮೌನವಾಗಿರುವುದು ದುರದೃಷ್ಟಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಸುಮಾರು 2800 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಯನ್ನು ನಾನು ನೋಡಿದ್ದೇನೆ. ಆದರೆ ಈ ಗಂಭೀರ ವಿಷಯದ ಬಗ್ಗೆ ಸರ್ಕಾರವಾಗಲಿ ಅಥವಾ ಸಂಬಂಧಪಟ್ಟವರಾಗಲಿ ಗಮನಹರಿಸುತ್ತಿಲ್ಲ. ಇದು ಈ ಸರ್ಕಾರದ ದೊಡ್ಡ ವೈಫಲ್ಯ,” ಎಂದು ಟೀಕಿಸಿದರು. ಸಾಲಮನ್ನಾ ಅಥವಾ ಹಣಕಾಸಿನ ನೆರವಿನ ವಿಚಾರದಲ್ಲಿ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಕೇವಲ 12 ಸಾವಿರ ಕೋಟಿ ರೂಪಾಯಿ ಮಾತ್ರ ನೀಡಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರದ ದಾಖಲೆ ಬಿಡುಗಡೆ: ಸರ್ಕಾರದ ಭ್ರಷ್ಟ ವ್ಯವಸ್ಥೆಯ ಬಗ್ಗೆ ವಾಗ್ದಾಳಿ ಮುಂದುವರಿಸಿದ ಕುಮಾರಸ್ವಾಮಿ, “ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಹತ್ವದ ವಿಚಾರಗಳನ್ನು ಮಾತನಾಡಬೇಕಿದೆ. ದಾಖಲೆಗಳನ್ನು ನೀಡಿದರೂ ಏನು ಪ್ರಯೋಜನವಾಗುತ್ತಿಲ್ಲ ಎಂಬ ನೋವಿದ್ದರೂ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಲ್ಲದು. ಈ ತಿಂಗಳ 20ರ ನಂತರ ನಾನು ಮತ್ತೆ ಬಂದು ಎಲ್ಲವನ್ನೂ ಸುದೀರ್ಘವಾಗಿ ಮಾತನಾಡುತ್ತೇನೆ ಮತ್ತು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ,” ಎಂದು ಎಚ್ಚರಿಸಿದರು.
ದ್ವೇಷ ಭಾಷಣ ಕಾಯ್ದೆ ಹಾಗೂ ಬಿಲ್ ವಿಚಾರ: ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ದ್ವೇಷ ಭಾಷಣ ತಡೆ ಕಾಯ್ದೆ’ಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದು ಕೇವಲ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ತಂದಿರುವ ಬಿಲ್ ಆಗಿದೆ. ಇಂತಹ ಕಾನೂನುಗಳಿಂದ ವಿರೋಧ ಪಕ್ಷದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ,” ಎಂದು ಆಕ್ರೋಶ ಹೊರಹಾಕಿದರು.
ರಾಷ್ಟ್ರಪತಿಗಳ ಭೇಟಿ: ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರು ಶ್ರೀ ಶಿವರಾತ್ರಿ ಶಿವಯೋಗಿಗಳವರ 1066ನೇ ಜಯಂತಿ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. “ವಾಸ್ತವವಾಗಿ ನಾನು ರಾಷ್ಟ್ರಪತಿಗಳ ಜೊತೆಯಲ್ಲೇ ದೆಹಲಿಯಿಂದ ಬರಬೇಕಿತ್ತು. ಆದರೆ ನನ್ನ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಮೊದಲೇ ರಾಜ್ಯಕ್ಕೆ ಬಂದಿದ್ದೇನೆ. ರಾಷ್ಟ್ರಪತಿಗಳನ್ನು ಬರಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ. ಮಳವಳ್ಳಿಯ ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ದೆಹಲಿಗೆ ಮರಳುತ್ತೇನೆ,” ಎಂದು ಮಾಹಿತಿ ನೀಡಿದರು.
