ಚಾಮರಾಜನಗರ , ಡಿಸೆಂಬರ್ 22, 2025 : ಚಾಮರಾಜನಗರದ ಅನೇಕ ಭಾಗಗಳಲ್ಲಿ ಹುಲಿ ಹಾವಳಿ ಹೆಚ್ಚಾಗುತ್ತಿದೆ. ಮತ್ತೊಮ್ಮೆ ನಂಜೆದೇವಪುರ ಬಳಿ 5 ಹುಲಿಗಳು ಕಾಣಿಸಿಕೊಂಡಿದ್ದು, ಹುಲಿಗಳ ಕಾಟಕ್ಕೆ ಬ್ರೇಕ್ ಬೀಳದಿರೋದು ಆತಂಕ ಹೆಚ್ಚಿಸಿದೆ.
ವ್ಯಾಘ್ರಗಳಿಗೆ ಬಲೆ ಬೀಸಲು ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಮುಂದಾಗಿದ್ದರೂ ಪಶು ವೈದ್ಯರ ಕೊರತೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಜಿಲ್ಲೆಯಲ್ಲಿ ಕೇವಲ ಇಬ್ಬರು ಪಶುವೈದ್ಯರು ಮಾತ್ರ ಲಭ್ಯವಿರುವುದರಿಂದ ಐದು ಹುಲಿಗಳಿಗೆ ಒಂದೇ ವೇಳೆ ಅರವಳಿಕೆ ಮದ್ದು ನೀಡುವುದು ಅಸಾಧ್ಯ ಎನ್ನಲಾಗುತ್ತಿದೆ. ಹೀಗಾಗಿಯೇ ಅರಣ್ಯ ಇಲಾಖೆ ಬೇರೆ ಪ್ಲಾನ್ ರೂಪಿಸಿದೆ.
ಇಬ್ಬರು ವೈದ್ಯರು ಎರಡು ಹುಲಿಗಳಿಗೆ ಮಾತ್ರ ಅರವಳಿಕೆ ನೀಡಿದರೆ ಗುಂಪಿನಲ್ಲಿ ಉಳಿದ ಹುಲಿಗಳು ಪ್ರತಿದಾಳಿ ಮಾಡುವ ಅಪಾಯ ಹೆಚ್ಚಿದ್ದು, ಅರಣ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರ ಜೀವಕ್ಕೆ ಭೀತಿ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಹುಲಿಗಳನ್ನು ಸೆರೆ ಹಿಡಿಯದೆ ಪಟಾಕಿ ಸದ್ದು ಮಾಡಿ ಹಾಗೂ ಎರಡು ಆನೆಗಳ ಸಹಾಯದಿಂದ ಕಾಡಿಗೆ ಓಡಿಸುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ.
