ಉಡುಪಿ, ಡಿಸೆಂಬರ್ 24, 2025 : ಭಾರತೀಯ ನೌಕಾಪಡೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ.
ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿ ಹಿರೇಂದ್ರ ಕುಮಾರ್ (34) (ಅಲಿಯಾಸ್ ಭರತ್ ಕುಮಾರ್ ಖದಾಯತ್) ಬಂಧಿತ ವ್ಯಕ್ತಿ. ಈತ ನೌಕಾಪಡೆಯ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟರಿಗೆ ರವಾನಿಸುತ್ತಿದ್ದ ಹಾಗೂ ಪ್ರಮುಖ ಆರೋಪಿಗಳಿಗೆ ಹಣದ ಆಮಿಷಕ್ಕಾಗಿ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ. ಇದೇ ಪ್ರಕರಣದಲ್ಲಿ ನವೆಂಬರ್ 21ರಂದು ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬುವವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು.
ಮಲ್ಪೆಯ ಶಿಪ್‌ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ ಬಂದರು ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯನ್ನು ಚುರುಕುಗೊಳಿಸಿದ ಮಲ್ಪೆ ಪೊಲೀಸರು, ಈ ಜಾಲದ ಹಿಂದೆ ಇದ್ದ ಹಿರೇಂದ್ರ ಕುಮಾರ್‌ನನ್ನು ಪತ್ತೆಹಚ್ಚಿ ಗುಜರಾತ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
