ಬೆಂಗಳೂರು, ನವೆಂಬರ್ 3, 2025 : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಇವತ್ತು ನಿರ್ಣಾಯಕ ದಿನ. ಡಿ ಗ್ಯಾಂಗ್ ನ ಎಲ್ಲ ಆರೋಪಿಗಳ ಮೇಲೆ ಕೋರ್ಟ್ ಇವತ್ತು ದೋಷಾರೋಪ ನಿಗದಿಪಡಿಸಲಿದೆ.
ಕಳೆದ ವಾರ ಕೊಲೆ ಕೇಸ್ ನಲ್ಲಿ ಎರಡನೇ ಆರೋಪಿ ನಟ ದರ್ಶನ್ ಹಾಗೂ ಎಲ್ಲಾ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಕೆಲವೇ ನಿಮಿಷಕ್ಕೆ ವಿಚಾರಣೆ ಮುಗಿದು ದೋಷಾರೋಪ ನಿಗದಿಯನ್ನು ಮುಂದೂಡಲಾಗಿತ್ತು. ಅಲ್ಲದೆ ದೋಷಾರೋಪ ನಿಗದಿ ಮಾಡುವ ದಿನದಂದು ಕಡ್ಡಾಯವಾಗಿ ಎಲ್ಲ ಆರೋಪಿಗಳು ಹಾಜರಿರಬೇಕು ಎಂದು ನ್ಯಾಯಾಧೀಶರು ಹೇಳಿದ್ದರು. ಹೀಗಾಗಿ ಇವತ್ತಿನ ವಿಚಾರಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ದರ್ಶನ್ ಭವಿಷ್ಯ ಏನಾಗಲಿದೆ ಅನ್ನೋ ಪ್ರಶ್ನೆ ಉದ್ಭವವಾಗಿದೆ.
ನವೆಂಬರ್ 3 ಇವತ್ತು ಡಿ ಗ್ಯಾಂಗ್ ನ ಎಲ್ಲಾ ಆರೋಪಿಗಳು ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ಕೋರ್ಟ್ ಕಟ್ಟಪ್ಪಣೆ ಜೈಲಿನಲ್ಲಿರುವ ಆರೋಪಿಗಳು ಹಾಗೂ ಜಾಮೀನು ಮೇಲಿರುವ ಆರೋಪಿಗಳು ಖುದ್ದು ಹಾಜರಾಗಬೇಕು. ಗೈರಾದರೆ ಇದ್ದಲ್ಲೇ ಬಂದು ಪೊಲೀಸರು ಅರೆಸ್ಟ್ ಮಾಡುತ್ತಾರೆ ಎಂದು ಕೋರ್ಟ್ ಎಚ್ಚರಿಸಿದೆ.
ರೇಣುಕಾ ಸ್ವಾಮಿ ಕೊಲೆಯಾದ ಸುಮಾರು ಒಂದೂವರೆ ವರ್ಷದ ಬಳಿಕ ಇದೀಗ ದೋಷಾರೋಪ ನಿಗದಿ ಆಗಲಿದೆ. ಇವತ್ತು ದರ್ಶನ್ ಹಾಗೂ ಇತರೆ ಆರೋಪಿಗಳ ಮೇಲೆ ಪೊಲೀಸರು ಹೇರಿರುವ ಆರೋಪಗಳನ್ನು ಆರೋಪಿಗಳಿಗೆ ಓದಿ ಹೇಳಲಾಗುತ್ತದೆ. ಬಳಿಕ ನ್ಯಾಯಾಧೀಶರು ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ..? ಎಂದು ಆರೋಪಿಗಳಿಗೆ ಕೇಳುತ್ತಾರೆ. ಒಂದು ವೇಳೆ ಆರೋಪಿಗಳು ತಮ್ಮ ಮೇಲಿರುವ ಆರೋಪಗಳನ್ನು ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗಲಿದೆ. ಒಂದೊಮ್ಮೆ ಆರೋಪಿಗಳು ಆರೋಪಗಳನ್ನು ನಿರಾಕರಿಸಿದರೆ ಸಾಕ್ಷ್ಯಗಳ ವಿಚಾರಣೆ ನಡೆಯಲಿದೆ. ಸಾಕ್ಷ್ಯಗಳ ವಿಚಾರಣೆಗೆ ದಿನಾಂಕವನ್ನು ಕೋರ್ಟ್ ನಿಗದಿ ಪಡಿಸುತ್ತದೆ. ಇದೇ ಪ್ರಕರಣದಲ್ಲಿ ಸಾಕಷ್ಟು ಸಂಖ್ಯೆಯ ಸಾಕ್ಷ್ಯಗಳು ಇರುವ ಕಾರಣ ಸಹಜವಾಗಿಯೇ ಎಲ್ಲರ ವಿಚಾರಣೆ ಸುಮಾರು ಎರಡು ವರ್ಷ ಸಮಯ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
