ಬೆಂಗಳೂರು, ಡಿಸೆಂಬರ್ 29, 2025 : ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ರಾಜ್ಯದ ಎ ಗ್ರೇಡ್ ದೇವಸ್ಥಾನಗಳು ಎಂಬ ಖ್ಯಾತಿಯನ್ನು ಕರಾವಳಿ ದೇವಸ್ಥಾನಗಳು ಪಡೆದಿದ್ದು, ಕರಾವಳಿಯ ಟಾಪ್ 3 ದೇವಸ್ಥಾನಗಳು ಹೆಚ್ಚಿನ ಆದಾಯ ತಂದುಕೊಟ್ಟಿದೆ.
ಪ್ರಮುಖವಾಗಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಅಗ್ರಸ್ಥಾನದಲ್ಲಿದೆ. ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ತದನಂತರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳು ಟಾಪ್ 3 ಪಟ್ಟಿಯಲ್ಲಿವೆ.
ಅಂಕಿ ಅಂಶಗಳ ಪ್ರಕಾರ 2024 ರಿಂದ 2025 ರವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ 155.95 ಕೋಟಿ ಆದಾಯ ಹರಿದುಬಂದಿದೆ. ಕುಕ್ಕೆ ಸುಬ್ರಹ್ಮಣ್ಯನೇ ನಂಬರ್ ಒನ್ ಆಗಿದ್ದಾನೆ. ನಂತರ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವ 2024 ರಿಂದ 2025 ನೇ ಸಾಲಿನಲ್ಲಿ 71.93 ಕೋಟಿ ಗಳಿಸಿದೆ. ಅದೇ ರೀತಿ, ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆದಾಯವು 2024- 2025 ರಲ್ಲಿ 50.68 ಕೋಟಿ ಗಳಿಸಿದೆ.
ಇನ್ನು, ಕರ್ನಾಟಕದ ಶ್ರೀಮಂತ ದೇವಸ್ಥಾನದ ಪಟ್ಟಿಯಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನವು 5 ನೇ ಸ್ಥಾನದಲ್ಲಿದ್ದು, 2024-2025ರಲ್ಲಿ 36.12 ಕೋಟಿ ಆದಾಯ ಗಳಿಸಿದೆ. ಅದೇ ರೀತಿ ಸವದತ್ತಿ ಯಲ್ಲಮ್ಮ ದೇವಸ್ಥಾನದ ಆದಾಯವು 29.95 ಕೋಟಿ ದಾಟಿ ನಂತರದ ಸ್ಥಾನ ಪಡೆದಿದೆ.
ಭಕ್ತರ ದೇಣಿಗೆಯಿಂದ ದೇವಾಲಯಗಳಿಗೆ ಕೋಟಿ ಕೋಟಿ ಆದಾಯ ಬಂದಿದ್ದು, ಮುಜುರಾಯಿ ಇಲಾಖೆ ಧಾರ್ಮಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ.
