ಮೈಸೂರು, ನವೆಂಬರ್ 7, 2025 : ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹೆಗ್ಗುಡಿಲು ಗ್ರಾಮದಲ್ಲಿ ಹುಲಿ ದಾಳಿಯಿಂದಾಗಿ ಇಂದು ರೈತ ದಂಡನಾಯಕ ಮೃತಪಟ್ಟಿದ್ದು , ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ. ಹುಲಿ ದಾಳಿಯಿಂದ ರೈತರೊಬ್ಬರು ಮೃತಪಟ್ಟ ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ್ದ RFO (ವಲಯ ಅರಣ್ಯಾಧಿಕಾರಿ) ಅಮೃತಾ ಅವರ ಮೇಲೆ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿದ್ದಾರೆ.

ಸರಗೂರು ತಾಲೂಕಿನ ಹೆಗ್ಗುಡಿಲು ಗ್ರಾಮದಲ್ಲಿ ಹುಲಿ ದಾಳಿಯಿಂದ ರೈತ ದಂಡನಾಯಕ ಮೃತಪಟ್ಟಿದ್ದಾರೆ. ಹುಲಿ ದಾಳಿಯನ್ನು ತಡೆಯಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ರೊಚ್ಚಿಗೆದ್ದ ಗ್ರಾಮಸ್ಥರು RFO ಅಮೃತಾ ಅವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಗ್ರಾಮಸ್ಥರು ಹಲ್ಲೆ ಮಾಡಲು ಮುಂದಾದಾಗ, ಸ್ಥಳದಲ್ಲಿದ್ದ ಇತರೆ ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ RFO ಅವರ ಮೇಲಿನ ಹಲ್ಲೆಯನ್ನು ತಡೆದಿದ್ದಾರೆ. ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿ ಸ್ಥಳದಲ್ಲಿ ಗ್ರಾಮಸ್ಥರ ಪ್ರತಿಭಟನೆ ಮುಂದುವರೆದಿದೆ.
ಮೈಸೂರು ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ತಿಂಗಳೊಳಗೆ ಹುಲಿ ದಾಳಿಗೆ ಬಲಿಯಾದ ಮೂರನೇ ವ್ಯಕ್ತಿ ರೈತ ದಂಡನಾಯಕ ಆಗಿದ್ದಾರೆ. ಈ ಕಾರಣದಿಂದಾಗಿ, ಸ್ಥಳೀಯರು ಭಯಭೀತರಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
