ಮೈಸೂರು, ಜನವರಿ 22, 2026 : ಬಡವರ ಹಸಿವು ನೀಗಿಸಬೇಕಾದ ನ್ಯಾಯಬೆಲೆ ಅಂಗಡಿಯ ಮಾಲೀಕನೊಬ್ಬ ಗ್ರಾಹಕರ ಬಳಿ ಅತ್ಯಂತ ಉದ್ಧಟತನದಿಂದ ವರ್ತಿಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಮೈಸೂರಿನ ಮಂಚೇಗೌಡನ ಕೊಪ್ಪಲಿನಲ್ಲಿರುವ ‘ಪ್ರತಿಮಾ’ ನ್ಯಾಯಬೆಲೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಅಂಗಡಿ ಮಾಲೀಕ ರಾಮಚಂದ್ರಪ್ಪ ಎಂಬಾತ ಅಕ್ಕಿ ಕೇಳಲು ಬಂದ ಗ್ರಾಹಕರ ಮೇಲೆ ದರ್ಪ ತೋರಿದ್ದಾನೆ.
ಅಕ್ಕಿ ವಿತರಣೆ ವಿಳಂಬದ ಬಗ್ಗೆ ಪ್ರಶ್ನಿಸಿದ ಮಹಿಳೆಯೊಬ್ಬರಿಗೆ ಉತ್ತರಿಸಿದ ಮಾಲೀಕ, “ಸರ್ಕಾರದಲ್ಲೇ ಅಕ್ಕಿ ಇಲ್ಲ, ಅವರೇ ಅಲ್ಲಿ ಹೊಡೆದಾಡ್ತಾವ್ರೆ. ಹೋಗಿ ಸರ್ಕಾರದ ಬಳಿಯೇ ಕೇಳಿ,” ಎಂದು ಏಕವಚನದಲ್ಲೇ ಗುಡುಗಿದ್ದಾನೆ. ಅಷ್ಟೇ ಅಲ್ಲದೆ, ಬೇರೆಯವರ ಬಳಿ “ಅಂಗಡಿ ಓಪನ್ ಆಗಿಲ್ಲ ಅಂತ ಹೇಳು” ಎಂದು ಹೇಳುವ ಮೂಲಕ ಸಾರ್ವಜನಿಕರ ಹಾದಿ ತಪ್ಪಿಸುವ ಪ್ರಯತ್ನವನ್ನೂ ಮಾಡಿದ್ದಾನೆ.
ಪ್ರತಿ ತಿಂಗಳು ಸಕಾಲಕ್ಕೆ ಅಕ್ಕಿ ನೀಡದೆ ಸತಾಯಿಸುವುದು ಈತನ ವಾಡಿಕೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ನ್ಯಾಯ ಕೇಳಲು ಹೋದ ಮಹಿಳೆಯ ಬಳಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮಾಲೀಕನ ಈ ದರ್ಪದ ವರ್ತನೆಯನ್ನು ಗ್ರಾಹಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ.
ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಬೇಕಾದವರೇ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಕೂಡಲೇ ಈ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
