ಮೈಸೂರು, ಏಪ್ರಿಲ್ 13, 2026 :ನಂಜನಗೂಡು ಮೂಲದ ಯುವಕನೋರ್ವನನ್ನು ಅಪಹರಿಸಿ, ಬಲವಂತವಾಗಿ ಮಂಗಳಮುಖಿಯ ವೇಷ ಧರಿಸಿ ಹಣ ವಸೂಲಿ ದಂಧೆಗೆ ಇಳಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ನಂಜನಗೂಡಿನ ತ್ಯಾಗರಾಜ ಕಾಲೋನಿಯ ನಿವಾಸಿ ಅನಿಲ್ ಕುಮಾರ್ (ಅಕ್ಷತಾ) ಈ ಕರಾಳ ದಂಧೆಯ ಸಂಚಿಗೆ ಬಲಿಯಾದ ಸಂತ್ರಸ್ತ. ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್‌ನನ್ನು ಪರಿಚಯಿಸಿಕೊಂಡ ಮಂಗಳಮುಖಿ ಅನಿತಾ ಮತ್ತು ತಂಡವು, ಆತನಿಗೆ ಮುಸುಕು ಹಾಕಿ ಬಲವಂತವಾಗಿ ಮಂಗಳೂರಿಗೆ ಅಪಹರಿಸಿಕೊಂಡು ಹೋಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮಂಗಳೂರಿನಲ್ಲಿ ಅನಿಲ್ ಕುಮಾರ್‌ಗೆ ಬಲವಂತವಾಗಿ ಸೀರೆ, ನೈಟಿ ಧರಿಸಿ, ಕಿವಿಗೆ ಓಲೆ ಹಾಗೂ ಮೂಗುತಿ ತೊಡಿಸಿ ಮಂಗಳಮುಖಿಯಂತೆ ಸಿದ್ಧಪಡಿಸಿದ ತಂಡವು, ಪ್ರತಿದಿನ ಬೀದಿಬದಿಯ ಅಂಗಡಿಗಳಲ್ಲಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರುತ್ತಿತ್ತು. ಈ ಮೂಲಕ ದಿನಕ್ಕೆ ಸುಮಾರು 2 ರಿಂದ 3 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಸಿಕೊಳ್ಳುತ್ತಿದ್ದ ಆರೋಪಿಗಳು, ಯುವಕನನ್ನು ಬಳಸಿ ರೀಲ್ಸ್ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದಲ್ಲದೆ, ಸಂತ್ರಸ್ತನನ್ನು ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್ ದಂಧೆಗೂ ಬಳಸಿಕೊಳ್ಳಲಾಗಿತ್ತು ಎಂದು ಸಂತ್ರಸ್ತ ಅನಿಲ್ ಕುಮಾರ್ ಅಳಲು ತೋಡಿಕೊಂಡಿದ್ದಾನೆ.
ದಂಧೆಯ ಜಾಲ ಎಷ್ಟು ಬಲವಾಗಿತ್ತೆಂದರೆ, ಅನಿಲ್ ಕುಮಾರ್‌ನ ಆಧಾರ್ ಕಾರ್ಡ್‌ನಲ್ಲಿ ಲಿಂಗವನ್ನು ‘ಟ್ರಾನ್ಸ್‌ಜೆಂಡರ್’ ಎಂದು ಬದಲಾಯಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಅಧಿಕೃತ ಪ್ರಮಾಣಪತ್ರವನ್ನೂ ಕೊಡಿಸಲಾಗಿತ್ತು. ಮುಂದಿನ ಹಂತವಾಗಿ ಆತನನ್ನು ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆಯ ಮೂಲಕ ಶಾಶ್ವತವಾಗಿ ಮಂಗಳಮುಖಿಯನ್ನಾಗಿ ಪರಿವರ್ತಿಸಲು ತಂಡವು ಸಂಚು ರೂಪಿಸಿತ್ತು. ಈ ವಿಷಯ ತಿಳಿದ ಅನಿಲ್ ಕುಮಾರ್ ಅವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿ, ತಾನು ದುಡಿದಿದ್ದ 3 ಲಕ್ಷ ರೂಪಾಯಿ ಹಣವನ್ನು ಕೇಳಿದಾಗ ಅನಿತಾ ತಂಡವು ಆತನಿಗೆ ಬೆದರಿಕೆ ಹಾಕಿದೆ. ಅನಿಲ್ ವಿರುದ್ಧವೇ 5 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿರುವ ಸುಳ್ಳು ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಲಾಗಿದೆ.
ಹೇಗೋ ಮಾಡಿ ಮಂಗಳೂರಿನಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿದ ಅನಿಲ್ ಕುಮಾರ್‌ಗೆ ಅಲ್ಲಿಯೂ ನೆಮ್ಮದಿ ಸಿಕ್ಕಿಲ್ಲ. ದಂಧೆಗೆ ವಾಪಸ್ ಬರುವಂತೆ ಒತ್ತಡ ಹೇರುತ್ತಿರುವ ಅನಿತಾ ತಂಡವು, ನಂಜನಗೂಡಿನ ಮನೆಗೆ ಮಂಗಳಮುಖಿಯರನ್ನು ಕಳುಹಿಸಿ ಗಲಾಟೆ ಮಾಡಿಸುತ್ತಿದ್ದಾರೆ ಎಂದು ದೂರಲಾಗಿದೆ. ಶೇಕಡಾ 90 ರಷ್ಟು ದೃಷ್ಟಿದೋಷ ಹೊಂದಿರುವ ಅನಿಲ್ ಕುಮಾರ್‌ಗೆ ಯಾವುದೇ ಲೈಂಗಿಕ ದೌರ್ಬಲ್ಯವಿಲ್ಲದಿದ್ದರೂ, ಸಮಾಜ ಕಲ್ಯಾಣ ಇಲಾಖೆ ಆತನಿಗೆ ಟ್ರಾನ್ಸ್‌ಜೆಂಡರ್ ಪ್ರಮಾಣಪತ್ರ ನೀಡಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ನಂಜನಗೂಡು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗದ ಕಾರಣ, ಸಂತ್ರಸ್ತ ಯುವಕ ಇದೀಗ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾನೆ.
