ಹುಣಸೂರು, ಫೆಬ್ರವರಿ 14, 2026: ಮೈಸೂರು ಜಿಲ್ಲೆಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿಮೀರಿದ್ದು, ತಡರಾತ್ರಿ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಮಚ್ಚು ಹಾಗೂ ಡ್ರಾಗನ್ ತೋರಿಸಿ ಹಣ ದೋಚಿರುವ ಘಟನೆ ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೈಸೂರು-ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ರವಿ ಎಂಬುವರಿಗೆ ಸೇರಿದ ಪೆಟ್ರೋಲ್ ಬಂಕ್‌ಗೆ ತಡರಾತ್ರಿ ಕಾರಿನಲ್ಲಿ ಬಂದ ಐವರು ಅಪರಿಚಿತ ದುಷ್ಕರ್ಮಿಗಳು, ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿದ್ದ ಹಣವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ದರೋಡೆಗೆ ಸಂಬಂಧಿಸಿದಂತೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಖದೀಮರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
