ಸರಗೂರು, ಫೆಬ್ರವರಿ 13, 2026: ಕಳೆದ ಕೆಲವು ದಿನಗಳಿಂದ ಕಣ್ಣು ಕಾಣದೆ ಅಲೆಯುತ್ತಾ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಸುಮಾರು 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ತಾಲೂಕಿನ ಮೊಳೆಯೂರು ವಲಯದ ಮಟದಕಟ್ಟೆ ಬಳಿಯ ಮೂರುಗುಂಡಿ ಹಳ್ಳದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಇತ್ತೀಚೆಗಷ್ಟೇ ಮೊಳೆಯೂರು ಗ್ರಾಮದಲ್ಲಿ ಓರ್ವ ಆದವಾಸಿಯನ್ನು ಬಲಿ ಪಡೆದಿದ್ದ ಈ ಕಾಡಾನೆಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆಯು ಕಳೆದ ನಾಲ್ಕು ದಿನಗಳಿಂದ ತೀವ್ರ ಕಾರ್ಯಾಚರಣೆ ಕೈಗೊಂಡಿತ್ತು. ಅಂತಿಮವಾಗಿ ಸಾಕಾನೆಗಳಾದ ಏಕಲವ್ಯ, ಸುಗ್ರೀವ, ಪ್ರಶಾಂತ ಹಾಗೂ ಅಯ್ಯಪ್ಪ ಆನೆಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸಿಎಫ್ ಪ್ರಭಾಕರನ್, ಎಸಿಎಫ್ ಪರಮೇಶ್ ಹಾಗೂ ಆರ್.ಎಫ್.ಒ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹಲವಾರು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸೆರೆಹಿಡಿಯಲಾದ ಕಾಡಾನೆಯನ್ನು ಸದ್ಯ ರಾಂಪುರ ಆನೆ ಶಿಬಿರಕ್ಕೆ ರವಾನಿಸಲಾಗಿದ್ದು, ಈ ಮೂಲಕ ಸ್ಥಳೀಯ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
