ಬೆಳಗಾವಿ, ನವೆಂಬರ್ 6, 2025 : ರಾಜ್ಯ ಸರ್ಕಾರ ಹಾಗೂ ಕಬ್ಬು ಬೆಳೆಗಾರರ ನಡುವೆ ಸಂಘರ್ಷ ತಾರಕಕ್ಕೇರಿದ್ದು, ಬೆಂಬಲ ಬೆಲೆ ನಿಗದಿಗೆ ರೈತರು ಡೆಡ್ ಲೈನ್ ನೀಡಿದ್ದಾರೆ. ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಕೊಡಲೇ ಬೇಕು ಎಂದು ಪಟ್ಟು ಹಿಡಿದಿರೋ ಕಬ್ಬು ಬೆಳೆಗಾರರು ಕಳೆದ 8 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಇವತ್ತು ರಾತ್ರಿ 8ರೊಳಗೆ ಬೇಡಿಕೆ ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ರಾತ್ರಿ ರೈತರ ಜತೆ ಸಚಿವ H.K. ಪಾಟೀಲ್ ನಡೆಸಿರೋ ಸಭೆ ವಿಫಲವಾಗಿದೆ. ಈಗಾಗಲೇ 8 ನೇ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದ್ದು, ಗುರ್ಲಾಪುರ ಮಾತ್ರವಲ್ಲದೇ ಅಥಣಿ, ರಾಯಬಾಗ, ಬೆಳಗಾವಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಯೂ ಹೋರಾಟ ನಡೆಯುತ್ತಿದೆ. ರೈತರ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸರ್ಕಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಸಿಎಂ ಭೇಟಿಗೆ ನಿಯೋಗ ತೆರಳುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಿದ್ದಾರೆ.
ಪ್ರಮುಖವಾಗಿ ಪ್ರತಿ ಟನ್ ಕಬ್ಬಿಗೆ 3500 ರೂ. ನಿಗದಿಪಡಿಸಿ ಆದೇಶ ಹೊರಡಿಸಬೇಕು.ಕಬ್ಬಿನ ತೆರಿಗೆ ಹಣದಲ್ಲಿ ರೈತರಿಗೆ 1 ಸಾವಿರ ರೂ. ನೀಡಬೇಕು.ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವುದು ಬಂದ್ ಆಗಬೇಕು.ಸರ್ಕಾರವೇ ಸಕ್ಕರೆ ಕಾರ್ಖಾನೆ ಬಳಿ ತೂಕದ ಮಷೀನ್ ಇಡಬೇಕು.ತೂಕ ಸೇರಿ ಪ್ರತಿಯೊಂದು ಮಾಹಿತಿ ಡಿಜಿಟಲೀಕರಣ ಮಾಡಬೇಕು.
ಸಕ್ಕರೆ ಆಯುಕ್ತರ ಕಚೇರಿಗೆ 100 ಸಿಬ್ಬಂದಿ ನೇಮಕ ಮಾಡಬೇಕು ಎಂದು ರೈತರು ಇಟ್ಟಿದ್ದಾರೆ.
ಈಗಾಗಲೇ ಬೆಳಗಾವಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಪ್ರತಿಭಟನೆ ಉಗ್ರ ರೂಪ ಪಡೆಯುವ ಸಾಧ್ಯತೆ ಇದೆ. ಹೆದ್ದಾರಿ ತಡೆಗೂ ಅನ್ನದಾತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
