ಚಿಕ್ಕಬಳ್ಳಾಪುರ : ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಲ್ಕನೆಯ ದಿನವಾದ ಇಂದು ಒಟ್ಟು 6 ಅಭ್ಯರ್ಥಿಗಳು ಚುನಾವಣಾಧಿಕಾರಿ ಪಿ.ಎನ್ ರವೀಂದ್ರ ಅವರಿಗೆ ಜಿಲ್ಲಾಡಳಿತ ಭವನದ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಎನ್. ಕಲಾವತಿ, ಬಹುಜನ್ ಸಮಾಜ ಪಾರ್ಟಿಯಿಂದ ಪಿ. ಮಹದೇವ್ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಹೆಚ್.ಸಿ. ಚಂದ್ರಶೇಖರ್, ರಮೇಶ್, ಜಿ.ಎನ್. ರವಿ, ರಾಮನಾಯ್ಕ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಪರ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ ಅವರು ಇದ್ದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ ಪ್ರತಿಯನ್ನು ಭಾರತ ಚುನಾವಣಾ ಆಯೋಗದ https://affidavit.eci.gov.in ಪೋರ್ಟಲ್ ನಲ್ಲಿ ಆಪ್ ಲೋಡ್ ಮಾಡಲಾಗಿದೆ ಮತ್ತು ಚುನಾವಣಾಧಿಕಾರಿಗಳ ಕಾರ್ಯಾಲಯದ ಸೂಚನ ಫಲಕದಲ್ಲಿ ನಾಮಪತ್ರದ ನಕಲು ಪ್ರತಿ ಮತ್ತು ಅಫಿಡವಿಟ್ ಅನ್ನು ಪ್ರಚುರಪಡಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.