ಮೈಸೂರು, ಡಿಸೆಂಬರ್ 11, 2025 : ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜಕೀಯ ಕಾರಣಗಳಿಗಾಗಿ ‘ದ್ವೇಷದ ಮಸೂದೆ’ಯನ್ನು ಮಂಡಿಸಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಅವರು ಮೈಸೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಹಿಂದೂ ಸಂಘಟನೆಗಳನ್ನು ದಮನ ಮಾಡಲು, ಹಾಗೂ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ದ್ವೇಷ ಭಾಷಣ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕಾಂಗ್ರೆಸ್ ಹಿಂದಿನಿಂದಲೂ ದ್ವೇಷದ ರಾಜಕಾರಣ ಮಾಡಿಕೊಂಡು ಬಂದಿದೆ ಎಂದು ಮಹೇಶ್ ಟೀಕಿಸಿದರು.
ತಮಿಳುನಾಡಿನಲ್ಲಿ ಬೆಟ್ಟದ ಮೇಲೆ ದೀಪ ಹಚ್ಚುವುದಕ್ಕೆ ನಿರ್ಬಂಧ ಹೇರಿರುವ ನಿರ್ಧಾರವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿದಂತಿದೆ. ಈ ತೀರ್ಪಿನ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ರಾಜ್ಯದ ಮೂವರು ಕಾಂಗ್ರೆಸ್ ಸಂಸದರು, ಹಾಸನದ ಶ್ರೇಯಸ್ ಪಟೇಲ್ ಸೇರಿದಂತೆ, ಸಹಿ ಹಾಕಿರುವುದು ಕಾಂಗ್ರೆಸ್ ಪಾರ್ಟಿ ಹಿಂದೂಗಳ ವಿರೋಧಿಯಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಮಹೇಶ್ ಆರೋಪಿಸಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಚಾರಧಾರೆಗಳನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಸೂದೆಯನ್ನು ಮಂಡಿಸಲಾಗಿದೆ. ಕಾಂಗ್ರೆಸ್ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದರು.
ಆಡಳಿತ ವೈಫಲ್ಯದ ಬಗ್ಗೆ ವಾಗ್ದಾಳಿ
ರಾಜ್ಯದಲ್ಲಿನ ಆಡಳಿತ ವೈಫಲ್ಯಗಳನ್ನು ಉಲ್ಲೇಖಿಸಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮೈಸೂರು ಡ್ರಗ್ಸ್ ಫ್ಯಾಕ್ಟರಿಯಾಗುತ್ತಿದೆ ಮತ್ತು ರಾಜ್ಯದಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆದರೂ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಇದಲ್ಲದೆ, ಕಾಂಗ್ರೆಸ್ ಪಕ್ಷವು ಚಾಮುಂಡಿ ಬೆಟ್ಟದ ಆದಾಯಕ್ಕೂ ಕೈ ಹಾಕಿದೆ ಎಂದು ಆರೋಪಿಸಿದ ಎಂ.ಜಿ. ಮಹೇಶ್, ಕಾಂಗ್ರೆಸ್ ಪಾರ್ಟಿ ದ್ವೇಷದ ರಾಜಕಾರಣ ಹೊರತುಪಡಿಸಿ ಬೇರೆ ಏನನ್ನು ಮಾಡುತ್ತಿಲ್ಲ ಎಂದು ಹೇಳಿ ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿದರು.
