ಚಾಮರಾಜನಗರ, ನವೆಂಬರ್ 29, 2025 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಲೆಂದು ಹಾರೈಸಿ, ಇಂದು ಚಾಮರಾಜನಗರದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು.

ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ನಗರದ ಪ್ರಮುಖ ದೇವಾಲಯವಾದ ಚಾಮರಾಜೇಶ್ವರನಿಗೆ ಈ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಒಕ್ಕಲಿಗ ಸಮಾಜದ ಮುಖಂಡರು ಡಿಕೆಶಿ ಅವರ ಭಾವಚಿತ್ರವನ್ನು ಹಿಡಿದು ಪೂಜಾ ಕೈಂಕರ್ಯಗಳನ್ನು ನಡೆಸಿ, ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.ಇತ್ತೀಚೆಗೆ ಚಂಚಶ್ರೀ ಸ್ವಾಮೀಜಿ ಅವರು ಡಿಕೆಶಿ ಸಿಎಂ ಆಗಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ಒಕ್ಕಲಿಗ ಸಮುದಾಯದ ಈ ಒತ್ತಾಯ ಮತ್ತು ಪೂಜಾ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಮಹತ್ವ ಪಡೆದಿವೆ.
ಪೂಜೆಯಲ್ಲಿ ಪಾಲ್ಗೊಂಡಿದ್ದ ಒಕ್ಕಲಿಗ ಮುಖಂಡರು, “ಸಮುದಾಯದ ನಾಯಕರಾದ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಬೇಕು. ಈ ನಿಟ್ಟಿನಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ,” ಎಂದು ಹೇಳಿದರು.ಈ ಪೂಜೆಯ ಮೂಲಕ, ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನದ ಸುತ್ತ ನಡೆಯುತ್ತಿರುವ ಚರ್ಚೆಗಳ ನಡುವೆ, ಚಾಮರಾಜನಗರದ ಒಕ್ಕಲಿಗ ಸಮುದಾಯವು ತಮ್ಮ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದೆ.
