ಚಿಕ್ಕಬಳ್ಳಾಪುರ, ಜನವರಿ 20, 2026 : ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ (Mantralaya) ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಹಿಂಬದಿಯಿಂದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಸಂಭವಿಸಿದೆ.

ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. 12 ಮಂದಿ ಗಾಯಾಳುಗಳನ್ನ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಇಬ್ಬರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹೊಸ ಬೈಕುಗಳನ್ನ ಹೊತ್ತು ಹೈದರಾಬಾದ್ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ಸುಗಮ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಕಂಟೇನರ್ ವಾಹನದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಬಿಹಾರ ಮೂಲದ 20 ವರ್ಷದ ಸುಹಾಸ್ ಎಂದು ಗುರುತಿಸಲಾಗಿದ್ದು, ತನ್ನ ಸ್ನೇಹಿತರೊಂದಿಗೆ ಬಿಹಾರಕ್ಕೆ ಸುಹಾಸ್ ತೆರಳುತ್ತಿದ್ದ ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಇನ್ನುಘಟನೆ ನಂತರ ಸ್ಥಳಕ್ಕೆ ಎಸ್‌ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ರು. ಅಪಘಾತದಲ್ಲಿ ಬಸ್ ಗುದ್ದಿದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸು ಕಂಟೈನರ್‌ನ ಒಳಗೆ ಸಿಲುಕಿಕೊಂಡಿದ್ದು, ಓರ್ವ ಪ್ರಯಾಣಿಕನ ಕಾಲು ಸಹ ಸಿಲುಕಿ ನರಳಾಡಿರೋದು ಕಂಡುಬಂದಿದೆ. ಗಂಟೆಗಟ್ಟಲೆ ಹರಸಹಾಸ ಪಟ್ಟು ಕೊನೆಗೆ ಕಟಿಂಗ್ ಮಿಷನ್ ಮೂಲಕ ರಾಡುಗಳನ್ನ ಕಟ್ ಮಾಡಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.
