ನಂಜನಗೂಡು, ಡಿಸೆಂಬರ್ 31, 2025 : ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾದ ನಂಜನಗೂಡು ಪಟ್ಟಣದಲ್ಲಿ ಕಳೆದ ತಡರಾತ್ರಿ ಖದೀಮರು ಅಟ್ಟಹಾಸ ಮೆರೆದಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯ ಅತ್ಯಂತ ಸಮೀಪದಲ್ಲೇ ಇರುವ ರಾಷ್ಟ್ರಪತಿ ರಸ್ತೆಯ ಸುಮಾರು 14 ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದಾರೆ.

ಡಿಸೆಂಬರ್ 30, 2025ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಕಳ್ಳರು ವ್ಯವಸ್ಥಿತವಾಗಿ ಒಂದಾದ ಮೇಲೊಂದರಂತೆ ಅಂಗಡಿಗಳ ಬೀಗ ಮುರಿದಿದ್ದಾರೆ. ಪೊಲೀಸ್ ಠಾಣೆಯ ಪಕ್ಕದ ಬಾಯ್ಸ್ ಮಿಡಲ್ ಸ್ಕೂಲ್ ಆವರಣದಲ್ಲಿರುವ ಹಾಲಿನ ಡೈರಿ, ಕೋಳಿ ಮಾರಾಟದ ಅಂಗಡಿಗಳು, 4ನೇ ಕ್ರಾಸ್‌ನ ಅಪ್ಪು ಸ್ಟೋರ್, ಅಕ್ಷಯ ಫುಟ್ ವೇರ್ ಹಾಗೂ 6ನೇ ಕ್ರಾಸ್‌ನಲ್ಲಿರುವ ಅಶ್ವಿನಿ ಬೇಕರಿ ಮತ್ತು ನಂಜುಂಡೇಶ್ವರ ಡಿಟಿಎಚ್ ವೀಡಿಯೋ ಶಾಪ್ ಸೇರಿದಂತೆ ಒಟ್ಟು 14 ಮಳಿಗೆಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ.
ಹಾಲಿನ ಡೈರಿಯಲ್ಲಿ 2 ಸಾವಿರ ರೂ. ಹಾಗೂ ಕೋಳಿ ಅಂಗಡಿಗಳ ಗಲ್ಲಾ ಪೆಟ್ಟಿಗೆಯಲ್ಲಿದ್ದ ಅಲ್ಪ ಪ್ರಮಾಣದ ನಗದನ್ನು ಕಳ್ಳರು ದೋಚಿದ್ದಾರೆ. ಇನ್ನುಳಿದ ಅಂಗಡಿಗಳಲ್ಲಿ ಕಬ್ಬಿಣದ ಸರಳಿನಿಂದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ.
ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ:
ಖದೀಮರು ಅಂಗಡಿಯ ಬೀಗ ಮುರಿಯುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಮುಖಕ್ಕೆ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ಸರಳಿನ ಸಹಾಯದಿಂದ ಬೀಗ ಒಡೆಯುತ್ತಿರುವ ದೃಶ್ಯ ಲಭ್ಯವಾಗಿದ್ದು, ಇದು ತನಿಖೆಗೆ ಪ್ರಮುಖ ಆಧಾರವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ನಂಜನಗೂಡು ಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಠಾಣೆಯ ಕೂಗಳತೆಯ ದೂರದಲ್ಲೇ ಸರಣಿ ಕಳ್ಳತನ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರ ಗಸ್ತಿನ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತುತ್ತಿದ್ದಾರೆ.
