ಮಂಡ್ಯ, ಫೆಬ್ರವರಿ 27, 2026 : ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ನೆಲೆಸಿರುವ, ಸುಮಾರು ಮೂರು ಶತಮಾನಗಳಿಗೂ ಹೆಚ್ಚಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಪುರಾತನ ಶ್ರೀ ತಿರುಮಲ ವೆಂಕಟರಮಣಸ್ವಾಮಿ ದೇಗುಲವು ಇದೀಗ ನವ ರೂಪದೊಂದಿಗೆ ಕಂಗೊಳಿಸುತ್ತಿದೆ. ಆರಂಭದಲ್ಲಿ ಪುಟ್ಟ ಗುಡಿಯಂತಿದ್ದ ಈ ಪವಿತ್ರ ಸ್ಥಳವು ಹಂತ ಹಂತವಾಗಿ ಅಭಿವೃದ್ಧಿ ಹೊಂದಿದ್ದು, ಪ್ರಸ್ತುತ ಜೀರ್ಣೋದ್ಧಾರಗೊಂಡು ಭಕ್ತರ ದರ್ಶನಕ್ಕೆ ಸಜ್ಜಾಗಿದೆ.

ವಿಶೇಷವಾಗಿ ದೇಗುಲದ ಒಳಾವರಣದ ಗೋಡೆಗಳ ಮೇಲೆ ದಶಾವತಾರದ ಅದ್ಭುತ ಶಿಲ್ಪಕಲಾಕೃತಿಗಳನ್ನು ಅಳವಡಿಸಲಾಗಿದ್ದು, ಶ್ರೀನಿವಾಸ ಕಲ್ಯಾಣ ಸೇರಿದಂತೆ ವಿವಿಧ ಪೌರಾಣಿಕ ಹಿನ್ನೆಲೆಯ ಚಿತ್ರಕಲಾಕೃತಿಗಳು ದೇಗುಲದ ಅಂದವನ್ನು ಇಮ್ಮಡಿಗೊಳಿಸಿವೆ. ಈ ಭವ್ಯ ಸಂಕೀರ್ಣಕ್ಕೆ ಈಗ ಸುಸಜ್ಜಿತ ಸಮುದಾಯ ಭವನವೂ ಸೇರ್ಪಡೆಯಾಗುತ್ತಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.
ಫೆಬ್ರವರಿ 28 ರಂದು ನಡೆಯಲಿರುವ ಈ ಐತಿಹಾಸಿಕ ಜೀರ್ಣೋದ್ಧಾರ, ಮಹಾ ಸಂಪ್ರೋಕ್ಷಣೆ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಸಮಾರಂಭದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಅವರು ಈಗಾಗಲೇ 10 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದಾರೆ. ಇವರೊಂದಿಗೆ ರಾಜ್ಯದ ಹಲವು ಮಂದಿ ಪ್ರಮುಖ ರಾಜಕೀಯ ಧುರೀಣರು ಹಾಗೂ ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ದೇಗುಲದ ಟ್ರಸ್ಟ್‌ನ ಅಧ್ಯಕ್ಷ ಪಿ.ಹೆಚ್. ಚಂದ್ರಶೇಖರ್, ಸದಸ್ಯರಾದ ಪಿ.ಹೆಚ್. ನಾಗರಾಜು, ಡಿ. ಕೃಷ್ಣ, ಮಂಡ್ಯ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್. ಲಿಂಗಣ್ಣ ಹಾಗೂ ದೇಗುಲದ ಪ್ರಧಾನ ಆಗಮಿಕ ವರುಣ್ ಕೌಂಡಿನ್ಯ ಅವರು ಪ್ರತಿನಿಧಿ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ದಶಕಗಳ ಇತಿಹಾಸವಿರುವ ಈ ದೇಗುಲವು ಗ್ರಾಮದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಶಕ್ತಿಯ ಕೇಂದ್ರವಾಗಿದ್ದು, ಈ ಪವಿತ್ರ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
