ಜ. 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯುವ ಪ್ರಯುಕ್ತ ಮಸೀದಿಗಳು, ದರ್ಗಾಗಳು ಮತ್ತು ಮದರಸಾಗಳಲ್ಲಿ ‘ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್’ ಎಂಬ ಮಂತ್ರ ಪಠಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಸ್ಲಿಂ ರಾಷ್ಟ್ರೀಯ ಮಂಚ್ ಮುಖ್ಯ ಪೋಷಕ ಮತ್ತು ಆರ್ಎಸ್ಎಸ್ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ‘ರಾಮ ಮಂದಿರ್, ರಾಷ್ಟ್ರ ಮಂದಿರ್ – ಎ ಕಾಮನ್ ಹೆರಿಟೇಜ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಶೇ. 99ರಷ್ಟು ಮುಸ್ಲಿಮರು ಹಾಗೂ ಇತರ ಹಿಂದೂಯೇತರರು ದೇಶಕ್ಕೆ ಸೇರಿದವರು. ನಮ್ಮೆಲ್ಲರ ಪೂರ್ವಜರು ಸಹ ಒಂದೇ. ಅವರು ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ, ದೇಶವನಲ್ಲ ಎಂದಿದ್ದಾರೆ.
ದರ್ಗಾಗಳು, ಮಕ್ತಬ್ಗಳು, ಮದರಸಾಗಳು ಮತ್ತು ಮಸೀದಿಗಳಲ್ಲಿ ‘ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್’ ಪಠಣ ಮಾಡಬೇಕು ಎಂಬುದಾಗಿ ಮುಸ್ಲಿಂ ರಾಷ್ಟ್ರೀಯ ಮಂಚ್ ಮನವಿ ಮಾಡಿದೆ. ಅದನ್ನೇ ಪುನರುಚ್ಚರಿಸುತ್ತೇನೆ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಮನೆತನ, ಧಾರ್ಮಿಕ ನಂಬಿಕೆ ಇತ್ಯಾದಿ ವ್ಯತ್ಯಾಸಗಳ ಹೊರತಾಗಿಯೂ ದೇಶದ ಮುಸ್ಲಿಮರು ಹಾಗೂ ಇತರ ಹಿಂದೂಯೇತರರು ಭಾರತದ ಅವಿಭಾಜ್ಯ ಅಂಗವೇ ಆಗಿದ್ದಾರೆ ಎಂದಿದ್ದಾರೆ. ಜತೆಗೆ, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಾಮೂಹಿಕ ಅಭಿವ್ಯಕ್ತಿಗೆ ಕರೆ ನೀಡಿದ್ದಾರೆ.
ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಾಮೂಹಿಕ ಅಭಿವ್ಯಕ್ತಿಗೆ ಇದೊಂದು ಸದವಕಾಶವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಧರ್ಮ ಮತ್ತು ಇತರ ನಂಬಿಕೆಗಳನ್ನು ಆಚರಿಸುವ ಜನರು ಧಾರ್ಮಿಕ ಸ್ಥಳಗಳಲ್ಲಿ ಒಳಗೊಳ್ಳುವಿಕೆಯ ಉತ್ಸಾಹದೊಂದಿಗೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಕುಮಾರ್ ಮನವಿ ಮಾಡಿದ್ದಾರೆ.