ಮೈಸೂರು, ಫೆಬ್ರವರಿ 28, 2026: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅತ್ಯಂತ ಅಪರೂಪದ ‘ಹಾರುವ ಹಾವು’ (Flying Snake) ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ನಗರದ ವಿಜಯನಗರ 1ನೇ ಹಂತದ ನಿವಾಸಿ ಗಂಗಾಧರಪ್ಪ ಎಂಬುವರ ಮನೆಯಲ್ಲಿ ಈ ವಿಶಿಷ್ಟ ಹಾವು ಪ್ರತ್ಯಕ್ಷವಾಗಿದ್ದು, ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶಾಮ್ ಅವರು ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಗಂಗಾಧರಪ್ಪ ಅವರ ಮನೆಯ ಅಡುಗೆ ಮನೆಯಲ್ಲಿದ್ದ ಡಬ್ಬವೊಂದರಲ್ಲಿ ಈ ಹಾವು ಅಡಗಿಕೊಂಡಿತ್ತು. ಕೆಲಸದ ವೇಳೆ ಇದ್ದಕ್ಕಿದ್ದಂತೆ ಹಾವನ್ನು ಕಂಡು ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಉರಗ ತಜ್ಞ ಸ್ನೇಕ್ ಶಾಮ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ನೇಕ್ ಶಾಮ್ ಅವರು ಹಾವನ್ನು ಸೆರೆಹಿಡಿದು ಪರಿಶೀಲಿಸಿದಾಗ, ಅದು ಬಲು ಅಪರೂಪದ ‘ಹಾರುವ ಹಾವು’ ಎಂದು ತಿಳಿದುಬಂದಿದೆ.
ನಂತರ ಮಾತನಾಡಿದ ಸ್ನೇಕ್ ಶಾಮ್ ಅವರು, “ಇದು ಅತ್ಯಂತ ವಿರಳವಾಗಿ ಕಂಡುಬರುವ ಹಾರುವ ಹಾವಿನ ಪ್ರಭೇದವಾಗಿದೆ. ಸಾಮಾನ್ಯವಾಗಿ ಇವು ಕಾಡು ಪ್ರದೇಶಗಳಲ್ಲಿ ಕಂಡುಬರುತ್ತವೆ, ನಗರ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ” ಎಂದು ಮಾಹಿತಿ ನೀಡಿದರು. ಈ ಹಾವಿನ ರಕ್ಷಣೆಯ ನಂತರ ಗಂಗಾಧರಪ್ಪ ಅವರ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.
