ಮಂಡ್ಯ: ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರ ನೀಡಬೇಕು, ಒಣಗುತ್ತಿರುವ ಬೆಳೆ ರಕ್ಷಣೆಗೆ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರ್ ಎಂ ವಿ ಪ್ರತಿಮೆಯಿಂದ ಮೆರವಣಿಗೆ ಹೊರಟ ರೈತ ಸಂಘದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆ ಅಭಾವ,ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಹಾಗೂ ನಾಲೆಗಳ ಆಸಮರ್ಪಕ ನಿರ್ವಹಣೆ ಬೆಳೆಗಳಿಗೆ ಸಂಕಷ್ಟ ತಂದೊಡ್ಡಿದ್ದರೆ ಬೇಸಿಗೆಯಲ್ಲಿ ಬೆಳೆದು ನಿಂತಿರುವ ಬೆಳೆ ರಕ್ಷಣೆ ಕಷ್ಟಕರವಾಗಿದೆ,ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕಬ್ಬು, ತೆಂಗು,ತೋಟಗಾರಿಕೆ ಅರಣ್ಯ ಕೃಷಿ ನೆಲಕಚ್ಚಿವೆ ಜನ – ಜಾನುವಾರುಗಳಿಗೆ ನೀರಿನ ಅಭಾವ ಎದುರಾಗಿದ್ದರೂ ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿಯಿಂದ ತತ್ತರಿಸಿರುವ ರೈತರಿಗೆ ನೆರವಾಗಲು ಪ್ರತಿ ಎಕರೆಗೆ 25000 ರೂ ಪರಿಹಾರ ನೀಡಬೇಕು, ಆದಷ್ಟು ಶೀಘ್ರವಾಗಿ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು, ಬ್ಯಾಂಕ್,ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ, ಚಿನ್ನದ ಅಡಮಾನ ಸಾಲ, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಬೇಕು,ಬೆಂಗಳೂರಿಗೆ ಕುಡಿಯುವ ನೀರಿನ ನೆಪದಲ್ಲಿ ಕಾವೇರಿ ನದಿ ಮೂಲಕ ನೀರು ಬಿಡುವುದನ್ನು ನಿಲ್ಲಿಸಿ ತಕ್ಷಣದಿಂದ ಜಿಲ್ಲೆಯ ನಾಲೆಗಳಿಗೆ ನೀರು ಹರಿಸಬೇಕು. ತೆಂಗು, ಅಡಿಕೆ, ಕಬ್ಬು, ತೋಟಗಾರಿಕೆ ಬೆಳೆಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ರೈತರ ಕೃಷಿ ಪಂಪ್ಸೆಟ್ಗಳ ಅಕ್ರಮ, ಸಕ್ರಮ ಯೋಜನೆ ಮರು ಜಾರಿ ಮಾಡಬೇಕು. ರೈತರ ಜಮೀನುಗಳಿಗೆ ಟ್ರಾನ್ಸ್ಫಾರ್ಮರ್ ಅಳವಡಿಸಲು ಮುಂದಾಗಬೇಕು ಅದೇ ರೀತಿ ಪ್ರತಿನಿತ್ಯ ತ್ರೀ ಫೇಸ್ ವಿದ್ಯುತ್ ನ್ನು ನಿರಂತರ ಎಂಟು ತಾಸು ಸರಬರಾಜು ಮಾಡಬೇಕು, ಜಿಲ್ಲೆಯ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳ ವಿಳಂಬ ತಪ್ಪಿಸಿ ಭ್ರಷ್ಟಾಚಾರ ನಿಯಂತ್ರಿಸಬೇಕು, ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ ₹ 18 ಸಾವಿರ ಬೆಂಬಲ ಬೆಲೆ ನೀಡಬೇಕು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಅವಧಿ ಮುಂದೂಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಕುದರಗುಂಡಿ ನಾಗರಾಜ್, ಸೀತಾರಾಮು, ನಂಜುಂಡಯ್ಯ ಕೀಳಘಟ್ಟ, ಅಣ್ಣೂರು ಮಹೇಂದ್ರ, ನಾಗಮಂಗಲ ಸುರೇಶ್, ಶಿವಲಿಂಗಯ್ಯ ಗುಡಿದೊಡ್ಡಿ, ಕಾಂತರಾಜು ಬೆಳ್ಳತ್ತೂರು, ಪುಟ್ಟಸ್ವಾಮಿ ಕೆ ಪಿ ದೊಡ್ಡಿ, ಲಿಂಗರಾಜು ಕೋಣಸಾಲೆ, ಕೆ.ಜಿ ಪ್ರಭುಲಿಂಗು, ನಾಗೇಂದ್ರ ಸ್ವಾಮಿ,ಸೊ.ಪಿ ಪ್ರಕಾಶ್, ಬೋರಲಿಂಗೇಗೌಡ ನೇತೃತ್ವ ವಹಿಸಿದ್ದರು.