ಮೈಸೂರು, ಡಿಸೆಂಬರ್ 29, 2025 : ಮೈಸೂರು ಅರಮನೆ ಸಮೀಪ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗಂಭೀರ ಸಂಶಯ ವ್ಯಕ್ತಪಡಿಸಿದ್ದು, ಈ ಘಟನೆಯನ್ನು ಕೂಡಲೇ ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಭೀಕರ ಸ್ಫೋಟದಲ್ಲಿ ಮೂವರು ಅಮಾಯಕ ಜೀವಗಳು ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ಘಟನೆಯ ಹಿನ್ನೆಲೆಯ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಹೀಲಿಯಂ ಗ್ಯಾಸ್ ಬಲೂನ್ ಮಾರಾಟಗಾರರೆಂದು ಹೇಳಿಕೊಂಡಿರುವ ಉತ್ತರ ಪ್ರದೇಶ ಮೂಲದ ಸಲೀಂ ಸೇರಿದಂತೆ ನಾಲ್ವರು ವ್ಯಕ್ತಿಗಳು ಲಾಡ್ಜ್ ಒಂದರ ಒಂದೇ ಕೊಠಡಿಯಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಆದರೆ, ಈ ವ್ಯಕ್ತಿಗಳು ನಿಜವಾಗಿಯೂ ಉತ್ತರ ಪ್ರದೇಶದವರೇ ಅಥವಾ ಬೇರೆ ಕಡೆಯಿಂದ ಬಂದವರೇ ಎಂಬುದನ್ನು ಸರ್ಕಾರ ದೃಢಪಡಿಸಬೇಕಿದೆ. ಕರ್ನಾಟಕ ಪೊಲೀಸರಿಂದ ಈ ಪ್ರಕರಣದಲ್ಲಿ ನಿರೀಕ್ಷಿತ ಮಟ್ಟದ ಮತ್ತು ಯೋಗ್ಯವಾದ ಫಲಿತಾಂಶ ಸಿಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಮುತಾಲಿಕ್, ಪ್ರಕರಣದ ಸೂಕ್ತ ತನಿಖೆಗಾಗಿ ಎನ್.ಐ.ಎ ಮಧ್ಯಪ್ರವೇಶಿಸುವುದು ಅತ್ಯಗತ್ಯ ಎಂದು ಒತ್ತಾಯಿಸಿದ್ದಾರೆ.
