ನಂಜನಗೂಡು, ಡಿಸೆಂಬರ್ 29, 2025: ತಾಲ್ಲೂಕಿನ ಹಳೇಪುರ ಗ್ರಾಮದ ವ್ಯಾಪ್ತಿಯಲ್ಲಿ ರಾತ್ರಿ ಪಾಳಯದ ಗಸ್ತಿನಲ್ಲಿದ್ದ (Night Rounds) ಪೊಲೀಸರಿಗೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಪೊಲೀಸರು ಅದರ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇಪುರದಿಂದ ಕೆಬ್ಬೇಪುರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದೆ.
ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು, ಎಸ್.ಬಿ. ರಮೇಶ್ ಮತ್ತು ಸಿಬ್ಬಂದಿ ಜೀಪ್‌ನಲ್ಲಿ ರಾತ್ರಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾಗ, ಅಕ್ರಂ ಎಂಬುವವರ ಜಮೀನಿನ ಬಳಿ ಚಿರತೆ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಜೀಪ್ ಚಾಲಕ ವಾಹನವನ್ನು ನಿಲ್ಲಿಸಿ ಹಿಂದಕ್ಕೆ ಬಂದಾಗ, ರಸ್ತೆ ಬದಿಯಲ್ಲಿ ಚಿರತೆ ಕುಳಿತಿರುವುದು ಕಂಡುಬಂದಿದೆ. ಈ ಅಪರೂಪದ ಹಾಗೂ ಭಯಾನಕ ದೃಶ್ಯವನ್ನು ಸಿಬ್ಬಂದಿಗಳು ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಇದೀಗ ಪೊಲೀಸರ ಕಣ್ಣಿಗೇ ಚಿರತೆ ಬಿದ್ದಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಬೋನು ಇರಿಸುವ ಮೂಲಕ ಚಿರತೆಯನ್ನು ಸೆರೆಹಿಡಿದು ಕಾಡಿಗೆ ಬಿಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
