ಮೈಸೂರು, ಫೆಬ್ರವರಿ 11, 2026: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ನಗರ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ನಗರದ ಸಿಸಿಬಿ ಹಾಗೂ ಮಂಡಿ ಠಾಣಾ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿ, ಅವರಿಂದ ಮಾದಕ ದ್ರವ್ಯ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡಿ ಮತ್ತು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಮಂಡಿ ಪೊಲೀಸರು, 3.14 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಂಡಿಮೊಹಲ್ಲಾದ ನಿವಾಸಿ ಮೊಹಮ್ಮದ್ ಕರೀಂ ಅಲಿಯಾಸ್ ಕಾಲು (29) ಮತ್ತು ಕಲ್ಯಾಣಗಿರಿಯ ನಿಷಾದ್ ಪಾಷಾ (36) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ಆರೋಪಿಗಳ ಪೈಕಿ ಮೊಹಮ್ಮದ್ ಕರೀಂ ವಿರುದ್ಧ ಈಗಾಗಲೇ ಮಂಡಿ, ಎನ್.ಆರ್ ಹಾಗೂ ಸೆನ್ ಪೊಲೀಸ್ ಠಾಣೆಗಳಲ್ಲಿ 5 ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ನಿಷಾದ್ ಪಾಷಾ ವಿರುದ್ಧ ಚನ್ನಪಟ್ಟಣ, ನಜರಬಾದ್ ಹಾಗೂ ಉದಯಗಿರಿ ಠಾಣೆಗಳಲ್ಲಿ ಕಳ್ಳತನ, ಸುಲಿಗೆ ಸೇರಿದಂತೆ ಒಟ್ಟು 5 ಕ್ರಿಮಿನಲ್ ಪ್ರಕರಣಗಳು ಇರುವುದು ಬೆಳಕಿಗೆ ಬಂದಿದೆ.
ಇದೇ ವೇಳೆ ಸಿಸಿಬಿ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಂಬೂಬಜಾರ್ ನಿವಾಸಿಗಳಾದ ಸಂಜಯ್ (31) ಮತ್ತು ರಾಜ್‌ಕುಮಾರ್ ಅಲಿಯಾಸ್ ಪುಟ್ಟ (30) ಎಂಬುವವರನ್ನು ಸೆರೆಹಿಡಿಯಲಾಗಿದೆ. ಇವರಿಂದ 35 ಗ್ರಾಂ ಹಾಗೂ 550 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಸಾಗಾಟಕ್ಕೆ ಬಳಸುತ್ತಿದ್ದ ಟಿವಿಎಸ್ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಇದಲ್ಲದೆ, ರಾಜೀವನಗರದ ಮೊಹಮ್ಮದ್ ಅಫಾಕ್ (23) ಎಂಬಾತನನ್ನು ಸಹ ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮೈಸೂರು ನಗರವನ್ನು ಮಾದಕವಸ್ತು ಮುಕ್ತಗೊಳಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ. ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆಗೆ ಸಂಬಂಧಿಸಿದ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ನೂತನವಾಗಿ ಸ್ಥಾಪಿಸಲಾಗಿರುವ “ವಿಮುಕ್ತಿ ಸಹಾಯವಾಣಿ” ಸಂಖ್ಯೆ: 8277948080 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮೈಸೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.
