ನಂಜನಗೂಡು, ಜನವರಿ 23, 2026 :ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ನಂಜನಗೂಡಿನಲ್ಲಿ ಸರಣಿ ಜಾನುವಾರು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ನಂಜನಗೂಡು ಟೌನ್ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ನಂಜನಗೂಡಿನ ಒಕ್ಕಲಗೇರಿ ಹಾಗೂ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಸನಿಹದಲ್ಲಿ ರಾತ್ರೋರಾತ್ರಿ 5 ಜಾನುವಾರುಗಳನ್ನು ಖದೀಮರು ಕದ್ದೊಯ್ದಿದ್ದರು. ಈ ಸಂಬಂಧ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಪೊಲೀಸರಿಗೆ ಕಳ್ಳರ ಸುಳಿವು ಲಭ್ಯವಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ತಂಡವು ಸುಲೇಮಾನ್ ಮತ್ತು ಸಿದ್ದಿಖ್ ಪಾಷಾ (ಮೈಸೂರಿನ ಕೆಸರೆ ನಿವಾಸಿಗಳು) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇವರು ಕೇವಲ ನಂಜನಗೂಡು ಮಾತ್ರವಲ್ಲದೆ, ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಬಿಳಿಗೆರೆ, ಬಿಳಿಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೈಚಳಕ ತೋರಿಸಿರುವುದು ಪತ್ತೆಯಾಗಿದೆ.
ಈ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣಗಳು ಇದೀಗ ಈ ಬಂಧನದಿಂದ ಸುಖಾಂತ್ಯ ಕಂಡಿವೆ. ಪೊಲೀಸರ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
