ಬೆಂಗಳೂರು, ನವೆಂಬರ್ 10, 2025 : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನೊಳಗಿನ ಗಂಭೀರ ಲೋಪಗಳನ್ನು ಬಯಲು ಮಾಡುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಈ ವಿಡಿಯೋಗಳು ಬಿಡುಗಡೆಯಾದ ಬೆನ್ನಲ್ಲೇ, ನಟ ದರ್ಶನ್ ಆಪ್ತ ಗೆಳೆಯ ನಟ ಧನ್ವೀರ್ ಅವರಿಗೆ ಸಂಕಷ್ಟ ಎದುರಾಗಿದೆ. ಈ ವಿಡಿಯೋಗಳನ್ನು ಧನ್ವೀರ್ ಅವರೇ ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಸಿಸಿಬಿ (CCB) ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಮತ್ತು ವಿಕೃತ ಕಾಮಿ ಉಮೇಶ್ ರೆಡ್ಡಿ ಸೇರಿದಂತೆ ಹಲವು ಕೈದಿಗಳು ಜೈಲಿನಲ್ಲಿ ಮೊಬೈಲ್ ಫೋನ್, ಟಿವಿ ಸೇರಿದಂತೆ ವಿಐಪಿ ಸವಲತ್ತುಗಳನ್ನು (ರಾಜಾತಿಥ್ಯ) ಅನುಭವಿಸುತ್ತಿರುವ ದೃಶ್ಯಗಳು ವಿಡಿಯೋಗಳಲ್ಲಿ ಸೆರೆಯಾಗಿದ್ದವು.
ಈ ಸಂಬಂಧ ಸಿಸಿಬಿ ಪೊಲೀಸರು ಭಾನುವಾರದಿಂದ ಧನ್ವೀರ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.ಅವರ ಮೊಬೈಲ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಸೋಮವಾರ ಹೆಚ್ಚಿನ ವಿಚಾರಣೆಗಾಗಿ ಧನ್ವೀರ್ ಅವರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ವಿಡಿಯೋಗಳು ವೈರಲ್ ಆಗುವುದಕ್ಕೂ ಮುನ್ನ, ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ, “ದರ್ಶನ್ ಅವರಿಗೆ ದಿಂಬು, ಹಾಸಿಗೆಯಂತಹ ಮೂಲ ಸೌಕರ್ಯಗಳನ್ನೂ ನೀಡುತ್ತಿಲ್ಲ, ಆದರೆ ಜೈಲಿನಲ್ಲಿ ಇತರೆ ಕೈದಿಗಳಿಗೆ ವಿಶೇಷ ಸವಲತ್ತುಗಳು ಸಿಗುತ್ತಿವೆ,” ಎಂದು ವಾದಿಸಿದ್ದರು. ಇದರ ಬೆನ್ನಲ್ಲೇ ಈ ವಿಡಿಯೋಗಳು ಹೊರಬಿದ್ದಿರುವುದು ಅನುಮಾನಗಳಿಗೆ ಕಾರಣವಾಗಿದೆ.
