ಮೈಸೂರು, ಜನವರಿ 13, 2026 : ಅಧಿಕಾರ ಹಂಚಿಕೆಯ ಕುರಿತಾದ ಊಹಾಪೋಹಗಳನ್ನು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿಂದು ತಳ್ಳಿಹಾಕಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಅಥವಾ ಸಮಸ್ಯೆಗಳಿಲ್ಲ, ಈ ಬಗ್ಗೆ ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ ಎಂದರು. ಮಾಹಿತಿ ಇಲ್ಲದ ಕೆಲವು ಶಾಸಕರು ನೀಡುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಈ ವಿಚಾರದಲ್ಲಿ ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ. ಶಿವಕುಮಾರ್ ಮಾತ್ರ ಎಂದು ಹೇಳಿದ್ದಾರೆ.
ಮುಂದುವೆರದು ಮಾತನಾಡಿದ ಅವರು, ನಮ್ಮಿಬ್ಬರ ನಡುವೆ ಯಾವುದೇ ಅಪಸ್ವರವಿಲ್ಲ ಮತ್ತು ನಾವಿಬ್ಬರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. ಹೈಕಮಾಂಡ್ ಜೊತೆಗೂ ನಿರಂತರ ಸಂಪರ್ಕದಲ್ಲಿದ್ದು, ಸದ್ಯಕ್ಕೆ ದೆಹಲಿ ಪ್ರವಾಸದ ಯಾವುದೇ ಯೋಜನೆಯಿಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ರಾಜ್ಯ ರಾಜಕಾರಣದ ಹಲವು ಪ್ರಮುಖ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಸರ್ಕಾರದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಸಿಎಂ, ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲಾಗುವುದು ಹಾಗೂ ಅದಕ್ಕೆ ಪೂರಕವಾದ ಸಿದ್ಧತೆಗಳು ನಡೆಯುತ್ತಿವೆ ಎಂದರು. ಬಜೆಟ್‌ಗೂ ಮುನ್ನ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಫೆಬ್ರವರಿ 13ರಂದು ಹಾವೇರಿಯಲ್ಲಿ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ವಿಶೇಷ ಅಧಿವೇಶನ ಕರೆಯುವ ಬಗ್ಗೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ಮೈಸೂರು ಭೇಟಿಯ ಕುರಿತು ಮಾಹಿತಿ ನೀಡಿ, ಅವರು ತಮಿಳುನಾಡಿನ ಗೂಡಲೂರು ಕಾರ್ಯಕ್ರಮಕ್ಕೆ ತೆರಳಲು ಮೈಸೂರಿಗೆ ಆಗಮಿಸಿದ್ದಾರೆ ಅಷ್ಟೇ. ಸಂಜೆ ಅವರು ಮೈಸೂರಿಗೆ ವಾಪಸ್ ಬಂದು ಇಲ್ಲಿಂದಲೇ ದೆಹಲಿಗೆ ತೆರಳಲಿದ್ದು, ಈ ವೇಳೆ ಯಾವುದೇ ರಾಜಕೀಯ ಸಭೆ ಅಥವಾ ಮಾತುಕತೆಗಳು ನಡೆಯುವುದಿಲ್ಲ, ಕೇವಲ ಶಿಷ್ಟಾಚಾರದಂತೆ ನಾನೇ ಹೋಗಿ ಅವರನ್ನು ಬೀಳ್ಕೊಡುತ್ತೇನೆ ಎಂದು ತಿಳಿಸಿದರು.
ಹೆಚ್.ಡಿ. ಕುಮಾರಸ್ವಾಮಿ ಅವರ ಸಕ್ರಿಯ ರಾಜಕಾರಣದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಮೊದಲು ಆರೋಗ್ಯ ಸುಧಾರಿಸಲಿ, ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, ಕೇವಲ ಹಾವಭಾವ ನೋಡಿ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದರು. ಇನ್ನು ಪಾಲಿಕೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೂ ನಮಗೆ ಯಾವುದೇ ಆತಂಕವಿಲ್ಲ. ಮತದಾರರಲ್ಲಿ ಕಾಂಗ್ರೆಸ್ ಪರ ಮತ್ತು ಕಾಂಗ್ರೆಸ್ ವಿರೋಧಿ ಎಂಬ ಎರಡು ವರ್ಗಗಳಿದ್ದು, ವಿರೋಧ ಪಕ್ಷಗಳು ಒಂದಾದಾಕ್ಷಣ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
