ಮೈಸೂರು, ನವೆಂಬರ್ 8, 2025 : ಸಿಎಂ ಕುರ್ಚಿಗಾಗಿ ನಡೆದ ರಾಜಕೀಯ ಪತ್ರ ಚಟುವಳಿಯ ನಂತರ ಇದೀಗ ಮೈಸೂರು ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಪತ್ರ ಚಳುವಳಿ ಮುಂದುವರೆದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ವಿನೂತನವಾದ ಪೋಸ್ಟ್ ಕಾರ್ಡ್ ಅಭಿಯಾನವನ್ನು ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ಎಸ್ ಸಿ ವಿಭಾಗದ ವತಿಯಿಂದ ಮೈಸೂರಿನ ಗಾಂಧಿ ಚೌಕದಲ್ಲಿ ಈ ಪೋಸ್ಟ್ ಕಾರ್ಡ್ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಮಾಜಿ ಮಹಾಪೌರರು, ಸದಸ್ಯರುಗಳು ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ತಮ್ಮ ನೆಚ್ಚಿನ ನಾಯಕನಿಗೆ ಸಚಿವ ಸ್ಥಾನ ದೊರಕಬೇಕೆಂದು ಆಗ್ರಹಿಸಿದ ಕಾಂಗ್ರೆಸ್ ಕಾರ್ಯಕರ್ತರು, “ಬೇಕೇ ಬೇಕು ತನ್ವೀರ್ ಸೇಠ್ ಗೆ ಮಂತ್ರಿ ಸ್ಥಾನ ಬೇಕು” ಎಂದು ಘೋಷಣೆಗಳನ್ನು ಕೂಗಿದರು. ಅಭಿಯಾನಕ್ಕಾಗಿ ಸಿದ್ಧಪಡಿಸಿದ ಪೋಸ್ಟ್ ಕಾರ್ಡ್‌ಗಳಲ್ಲಿ ತನ್ವೀರ್ ಸೇಠ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿತ್ತು ಮತ್ತು ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪತ್ರ ಬರೆಯಲಾಗಿತ್ತು. ಪ್ರತಿಭಟನೆಯಲ್ಲಿ ಭಾಗಿಯಾದ ಅಭಿಮಾನಿಗಳು ಇದೇ ಪತ್ರಗಳಿಗೆ ಸಹಿ ಹಾಕುವ ಮೂಲಕ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕರ್ತರು ತನ್ವಿರ್ ಸೇಠ್ ಅವರ ಫ್ಲಕಾರ್ಡ್‌ಗಳನ್ನು ಹಿಡಿದುಕೊಂಡು ಘೋಷಣೆ ಕೂಗಿದರು.

ಈ ಎಲ್ಲಾ ಪೋಸ್ಟ್ ಕಾರ್ಡ್‌ಗಳನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಅವರಿಗೆ ಕಳುಹಿಸಲು ಉದ್ದೇಶಿಸಲಾಗಿದೆ. ಈ ಪೋಸ್ಟ್ ಕಾರ್ಡ್ ಚಳುವಳಿಯು ಮೈಸೂರು ಕಾಂಗ್ರೆಸ್‌ನ ರಾಜಕೀಯ ವಾತಾವರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
