ಮೈಸೂರು, ಜನವರಿ 13, ಮ2026 :ಮೈಸೂರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಇಡೀ ರಾಜ್ಯದಲ್ಲಿಯೇ ಮೈಸೂರು 6ನೇ ಸ್ಥಾನದಲ್ಲಿದೆ ಎಂಬ ಕಳವಳಕಾರಿ ಮಾಹಿತಿ ಹೊರಬಿದ್ದಿದೆ. ಮೈಸೂರಿನ ಆರ್.ಟಿ.ಒ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಚೌಹಾಣ್ ಅವರು, ಅಪಘಾತ ಪ್ರಕರಣಗಳಲ್ಲಿ ಜಿಲ್ಲೆಯು ರಾಜ್ಯದ ‘ಟಾಪ್ 10’ ಪಟ್ಟಿಯಲ್ಲಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಇಲಾಖೆಯು ‘ರಸ್ತೆ ಸುರಕ್ಷತಾ ಮಾಸಾಚರಣೆ’ ಹಮ್ಮಿಕೊಳ್ಳುತ್ತಿದ್ದು, ವಾಹನ ಸವಾರರಲ್ಲಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ಆರ್.ಟಿ.ಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಬಹುತೇಕ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಗಳಿಗೆ ಅನುಗುಣವಾಗಿ, ‘ಸಾರಥಿ’ ತಂತ್ರಾಂಶದ ಮೂಲಕ ಡಿಎಲ್ (DL) ಮತ್ತು ಎಲ್.ಎಲ್ (LL) ಗೆ ಸಂಬಂಧಿಸಿದ ಸೇವೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇದರೊಂದಿಗೆ ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ತೆರಿಗೆ ಪಾವತಿ, ನಕಲು ನೋಂದಣಿ ಪತ್ರ ಹಾಗೂ ನೋಂದಣಿ ಪತ್ರ ನವೀಕರಣ ಸೇರಿದಂತೆ ಹಲವು ಪ್ರಮುಖ ಸೇವೆಗಳನ್ನು ಸಾರ್ವಜನಿಕರು ಆನ್‌ಲೈನ್ ಮೂಲಕವೇ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನು ಚಿತ್ರದುರ್ಗ ಬಳಿ ನಡೆದ ಭೀಕರ ಸ್ಲೀಪರ್ ಬಸ್ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮೈಸೂರು ಸಾರಿಗೆ ಇಲಾಖೆ ಅಧಿಕಾರಿಗಳು, ಜಿಲ್ಲೆಯಾದ್ಯಂತ ಖಾಸಗಿ ಬಸ್‌ಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಸಾರಿಗೆ ಸಚಿವರ ಸೂಚನೆಯಂತೆ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸುಮಾರು 60ಕ್ಕೂ ಹೆಚ್ಚು ಸ್ಲೀಪರ್ ಬಸ್‌ಗಳನ್ನು ತಪಾಸಣೆ ನಡೆಸಲಾಗಿದ್ದು, ಬಸ್‌ಗಳಲ್ಲಿ ಅಳವಡಿಸಲಾಗಿರುವ ಸುರಕ್ಷತಾ ಪರಿಕರಗಳನ್ನು ಪರಿಶೀಲಿಸಲಾಗಿದೆ. ಈ ಕಾರ್ಯಾಚರಣೆಯ ವೇಳೆ ನಿಯಮ ಉಲ್ಲಂಘಿಸಿದ 16 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಸಂತ್ ಚೌಹಾಣ್ ತಿಳಿಸಿದ್ದಾರೆ.
