ಮೈಸೂರು, ನವೆಂಬರ್ 18, 2025 :ಪ್ರತಿಭೆ ಅನ್ನೋದು ಯಾರಪ್ಪನ ಮನೆ ಸ್ವತ್ತಲ್ಲ.. ಅವಕಾಶ ಸಿಗದಕ್ಕೆ ಕೊರಗೋ ಬದಲು ತಮ್ಮ ಹಣೆಬರಹವನ್ನ ತಾವೇ ಬರೆದುಕೊಂಡ್ರೆ ಬದುಕು ಸಾಧನೆ ಪಥದತ್ತ ಸಾಗ್ತದೆ.ಇಲ್ಲೊಬ್ಬ ಅಪ್ಪಟ ದೇಸಿ ಕ್ರಿಕೆಟ್ ಪ್ರತಿಭೆ ಕ್ರಿಕೆಟನ್ನೇ ಉಸಿರಾಗಿಸಿಕೊಂಡು ಬದುಕುತ್ತಿದ್ದ ಜೀವ ಇಂದು ವಿಧಿಗೆ ಸವಾಲೊಡ್ಡಿ ಕೀರ್ತಿ ಸಂಪಾದಿಸಿದ್ದಾನೆ.
ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಆಡುತ್ತಿದ್ದ ನಾರಾಯಣ ಸದಾಶಿವ ಇದೀಗ ಓಮನ್ ದೇಶದ ಭರವಸೆಯ ಕ್ರಿಕೆಟರ್ ಆಗುವ ಭರವಸೆ ಮೂಡಿಸಿದ್ದಾರೆ. ಓಮನ್ ಕ್ರಿಕೆಟ್‌ನ ಭವಿಷ್ಯದ ಸ್ಟಾರ್ ಆಟಗಾರನಾಗುವತ್ತ ನಾರಾಯಣ ದಾಪುಗಾಲಿಟ್ಟಿದ್ದಾರೆ.

ನಾರಾಯಣ್ ಸಾಯಿಶಿವ ಓಮನ್ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಟಿಂಗ್ ಜತೆ ಬಲಗೈ ಮಧ್ಯಮ ವೇಗದ ಬೌಲರ್ ಆಗಿಯೂ ಜವಾಬ್ದಾರಿ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.ಪ್ರಸ್ತುತ ದೋಹಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಆಡುತ್ತಿರುವ ನಾರಾಯಣ್ ಸಾಯಿಶಿವ, ಸದ್ಯ ಪಾಕಿಸ್ತಾನ ಎ ತಂಡದ ವಿರುದ್ಧ ಹಾಗೂ ಯುಎಇ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಿ ಗಮನ ಸೆಳೆದಿದ್ದಾರೆ.
ನಾರಾಯಣ್ ಸಾಯಿಶಿವ ಹುಟ್ಟಿ ಬೆಳೆದದ್ದು ನಮ್ಮ ಮೈಸೂರಿನಲ್ಲಿ ಎಂಬುದೇ ಹೆಮ್ಮೆ ಕೆ.ಜಿ.ಕೊಪ್ಪಲಿನ ಈ ಹುಡುಗ ತಾನು ಕ್ರಿಕೆಟರ್ ಆಗಬೇಕೆಂಬ ದೊಡ್ಡ ಕನಸು ಹೊತ್ತಿದ್ದ. ಅದಕ್ಕಾಗಿ ಬಾಲ್ಯದಿಂದಲೇ ನಿರಂತರ ಅಭ್ಯಾಸದಲ್ಲಿ ತೊಡಗಿಸಿದ್ದರು.2010ರಲ್ಲಿ ಮೈಸೂರಿನ ರಮೇಶ್ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ತರಬೇತುದಾರ ರಮೇಶ್ ಅವರ ಗರಡಿಯಲ್ಲಿ ಪಳಗಿದ ಸಾಯಿಶಿವ, ಸತತ 10 ವರ್ಷಗಳ ಕಾಲ ಕ್ರಿಕೆಟ್ ತರಬೇತಿ ಪಡೆದು ಇದೀಗ ಒಮನ್ ದೇಶದ ಪರ ಕ್ರಿಕೆಟ್ ಆಡೋಕೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆ ಮೂಲಕ ಕನ್ನಡಿಗರಿಗೆ ಸ್ಫೂರ್ತಿಯಾಗಿದ್ದಾರೆ. ಕುಟುಂಬದ ಆರ್ಥಿಕ ಸಮಸ್ಯೆಗಳ ನಡುವೆಯೂ ನಾರಾಯಣ್ ಸಾಯಿಶಿವ ಎದೆಗುಂದದೇ. ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ಇದೀಗ ಈ ಮಟ್ಟಕ್ಕೆ ಬೆಳೆದಿದ್ದಾರೆ.
