ಮೈಸೂರು , ಡಿಸೆಂಬರ್ 10, 2025 : ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಸಾವನ್ನಪ್ಪಿವೆ. ಮೈಸೂರಿನ ಹೊರವಲಯದ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಈ ಮರಿಗಳು ನಾಲ್ಕು ದಿನಗಳ ಅಂತರದಲ್ಲಿ ಮೃತಪಟ್ಟಿವೆ. ಹುಲಿ ಮರಿಗಳ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
ಗೌಡನಕಟ್ಟೆಯ ಪ್ರಕಾಶ್ ಎಂಬುವರ ಜೋಳದ ಹೊಲದಲ್ಲಿ ಕಳೆದ ನವೆಂಬರ್ 28ರಂದು ತಾಯಿ ಹುಲಿಯು ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ಅದೇ ಮಧ್ಯರಾತ್ರಿ ತಾಯಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿತ್ತು.
ಇದಾದ ಎರಡು ದಿನಗಳ ನಂತರ ಅಂದರೆ ನವೆಂಬರ್ 30ರಂದು ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಹುಲಿ ಮರಿಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಜನರ ಕಿರುಚಾಟದಿಂದ ಮರಿಗಳು ತೀವ್ರವಾಗಿ ಗಾಬರಿಗೊಂಡಿದ್ದವು ಎಂದು ತಿಳಿದುಬಂದಿದೆ.
ಎರಡು ದಿನಗಳ ಕಾಲ ತಾಯಿಯಿಂದ ದೂರ ಉಳಿದಿದ್ದ ಮರಿಗಳು ಆಹಾರವಿಲ್ಲದೇ ಬಳಲಿದ್ದವು. ಜನರ ಕೂಗಾಟದಿಂದ ಓಡಾಡಿ ಸೆರೆ ಹಿಡಿಯುವ ವೇಳೆಗೆ ಸಂಪೂರ್ಣವಾಗಿ ನಿತ್ರಾಣಗೊಂಡಿದ್ದವು. ತಕ್ಷಣವೇ ಅವುಗಳನ್ನು ಸೂಕ್ತ ಚಿಕಿತ್ಸೆಗಾಗಿ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಗಾಬರಿಗೊಳಗಾಗಿದ್ದ ಮರಿಗಳು ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅಸ್ವಸ್ಥಗೊಂಡಿದ್ದ ಈ ಹುಲಿ ಮರಿಗಳು ಒಂದಾದ ನಂತರ ಒಂದು ಸಾವನ್ನಪ್ಪಿವೆ.
ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಅಂಗಾಂಗಗಳು
ಪಶುವೈದ್ಯರು ಸಾವನ್ನಪ್ಪಿರುವ ಹುಲಿ ಮರಿಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಮೃತಪಟ್ಟ ಮರಿಗಳ ಅಂಗಾಂಗಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಹುಲಿ ಮರಿಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ತಾಯಿ ಹುಲಿಯು ಸದ್ಯಕ್ಕೆ ಆರೋಗ್ಯದಿಂದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಗೌಪ್ಯತೆ ಕಾಯ್ದುಕೊಂಡ ಅರಣ್ಯ ಇಲಾಖೆ
ಹುಲಿ ಮರಿಗಳ ಸಾವಿನ ಬಗ್ಗೆ ಅರಣ್ಯ ಇಲಾಖೆ ಯಾವುದೇ ಮಾಹಿತಿ ನೀಡದೆ ಗೌಪ್ಯತೆಯನ್ನು ಕಾಯ್ದುಕೊಂಡಿದೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಅವರು ಸ್ವೀಕರಿಸಿಲ್ಲ.
