ಮೈಸೂರು, ಫೆಬ್ರವರಿ 5, 2026: ನಗರದ ಸಿಸಿಬಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಾತಗಳ್ಳಿಯ ಮೂನ್ ಬಕ್ಸ್ ಕೆಫೆ ಬಳಿ ಈ ಕಾರ್ಯಾಚರಣೆ ನಡೆದಿದ್ದು, ಅಮೀರ್ ಖಾನ್, ಸೈಯದ್ ಇಮ್ರಾನ್ ಮತ್ತು ಮಹಮ್ಮದ್ ನಬೀಲ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತರಿಂದ ಅಂದಾಜು 1,20,000 ರೂಪಾಯಿ ಮೌಲ್ಯದ 11 ಗ್ರಾಂ 90 ಮಿಲಿಗ್ರಾಂ ಎಂ.ಡಿ.ಎಂ.ಎ (MDMA) ಮಾದಕ ದ್ರವ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ (NDPS) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ಮಾದಕ ದ್ರವ್ಯ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಸಿಸಿಬಿ ಪೊಲೀಸರು ಈ ಯಶಸ್ವಿ ದಾಳಿ ನಡೆಸಿದ್ದಾರೆ.
