ಮೈಸೂರು, ಡಿಸೆಂಬರ್ 20, 2025 :ಮೈಸೂರಿನ ಹಿನಕಲ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳ ತೂಕದಲ್ಲಿ ನಡೆದಿದೆ ಎನ್ನಲಾದ ಭಾರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಕಸಾಲಿಗ ಅಶ್ವಿನ್ ಆಚಾರ್ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಾಗಿದೆ.
ಕಳೆದ 2014ರಿಂದ ಇದೇ ಬ್ಯಾಂಕ್‌ನಲ್ಲಿ ಅಕ್ಕಸಾಲಿಗನಾಗಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನ್ ಆಚಾರ್ ವಿರುದ್ಧ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ರಾಜಶೇಖರ್ ಅವರು ನೀಡಿದ ದೂರಿನ ಆಧಾರದ ಮೇರೆಗೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ವಂಚನೆ ಜಾಲವು ಇತ್ತೀಚೆಗೆ ಗ್ರಾಹಕರಾದ ಎಚ್.ವಿ. ಕಿರಣ್ ಹಾಗೂ ಶ್ವೇತಾ ಅವರು ತಾವು ಬಿಡಿಸಿಕೊಂಡ ಚಿನ್ನದ ತೂಕದ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಬೆಳಕಿಗೆ ಬಂದಿತ್ತು.
ಗ್ರಾಹಕರ ದೂರಿನ ಬೆನ್ನಲ್ಲೇ ಬ್ಯಾಂಕ್ ಸಿಬ್ಬಂದಿ ನಡೆಸಿದ ಆಂತರಿಕ ಪರಿಶೀಲನೆಯು ವಂಚನೆಯನ್ನು ದೃಢಪಡಿಸಿದೆ. ವಿಶೇಷವಾಗಿ ರಾಧಾ ಎಂಬ ಗ್ರಾಹಕರು 19-12-2025ರಂದು ತಾವು ಅಡವಿಟ್ಟಿದ್ದ ಚಿನ್ನದಲ್ಲಿ 3.573 ಗ್ರಾಂನಷ್ಟು ವ್ಯತ್ಯಾಸವಿರುವುದನ್ನು ಪತ್ತೆಹಚ್ಚಿ ಬ್ಯಾಂಕ್‌ಗೆ ಅಧಿಕೃತ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪುನಃ ತೂಕ ಪರೀಕ್ಷೆ ನಡೆಸಿದಾಗ ಚಿನ್ನದ ಪ್ರಮಾಣ ಕಡಿಮೆ ಇರುವುದು ಪತ್ತೆಯಾಗಿದೆ.
ನಂಬಿಕಸ್ಥ ಅಕ್ಕಸಾಲಿಗನಿಂದಲೇ ಗ್ರಾಹಕರಿಗೆ ಮೋಸವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪ್ರಾದೇಶಿಕ ವ್ಯವಸ್ಥಾಪಕರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಅಶ್ವಿನ್ ಆಚಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
