ಮೈಸೂರು, ಜನವರಿ 24, 2026: ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರದಿಂದ ಸರಿಯಾದ ಪತ್ರ ವ್ಯವಹಾರ ನಡೆಯದ ಕಾರಣ ಈ ಗೊಂದಲ ಉಂಟಾಗಿದೆ ಮತ್ತು ಅಂತಿಮವಾಗಿ ಸ್ತಬ್ಧಚಿತ್ರ ಪ್ರದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು ರಾಜ್ಯದ ಪ್ರಚಲಿತ ವಿದ್ಯಮಾನಗಳ ಕುರಿತು ಮಹತ್ವದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.ಮೈಸೂರು-ಕುಶಾಲನಗರ ರೈಲ್ವೆ ಯೋಜನೆಯ ವಿಳಂಬದ ಕುರಿತು ಪ್ರಸ್ತಾಪಿಸಿದ ಸಂಸದರು, ರಾಜ್ಯ ಸರ್ಕಾರವು ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಹಸ್ತಾಂತರಿಸದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಮೈಸೂರು ಮತ್ತು ಕೊಡಗು ಜನರ ಹಿತದೃಷ್ಟಿಯಿಂದ ಈ ಯೋಜನೆ ಅತ್ಯಗತ್ಯವಾಗಿದ್ದು, ಈ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ರೈಲ್ವೆ ಇಲಾಖೆಯ ಗಮನ ಸೆಳೆಯಲಾಗಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಮತ್ತೊಮ್ಮೆ ಪ್ರಯತ್ನ ನಡೆಸುವುದಾಗಿ ತಿಳಿಸಿದ ಅವರು, ರಾಜ್ಯ ಸರ್ಕಾರವೂ ಇದಕ್ಕೆ ಪೂರಕವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಯದುವೀರ್ ಅವರು, ಬಳ್ಳಾರಿಯಲ್ಲಿ ನಡೆಯುತ್ತಿರುವ ಸತತ ಗಲಾಟೆಗಳು ಇದಕ್ಕೆ ಸಾಕ್ಷಿಯಾಗಿದೆ ಎಂದರು. ಇದರ ವಿರುದ್ಧ ಈಗಾಗಲೇ ಹೋರಾಟ ನಡೆಸಲಾಗಿದ್ದು, ಸರ್ಕಾರ ಕೂಡಲೇ ಎಚ್ಚೆತ್ತು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಧಿವೇಶನದಲ್ಲಿ ರಾಜ್ಯಪಾಲರ ವಿರುದ್ಧ ನಡೆದ ವರ್ತನೆಯನ್ನು ಖಂಡಿಸಿದ ಅವರು, ಸಂವಿಧಾನಾತ್ಮಕ ಜವಾಬ್ದಾರಿ ನಿಭಾಯಿಸುತ್ತಿರುವ ರಾಜ್ಯಪಾಲರಿಗೆ ಮುತ್ತಿಗೆ ಹಾಕಿ ಗೂಂಡಾ ರೀತಿಯಲ್ಲಿ ವರ್ತಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸರ್ಕಾರದ ಈ ನಡೆಯನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಟೀಕಿಸಿದರು.
ಚಾಮುಂಡಿ ಬೆಟ್ಟದ ‘ಪ್ರಸಾದ್’ ಯೋಜನೆಯ ಕಾಮಗಾರಿಗೆ ಗ್ರಾಮಸ್ಥರ ವಿರೋಧವಿರುವ ಬಗ್ಗೆ ಮಾತನಾಡಿದ ಅವರು, ದೇಗುಲದ ಪಕ್ಕದಲ್ಲೇ ನಡೆಯುತ್ತಿರುವ ಕಾಮಗಾರಿಯಿಂದ ಗೋಪುರಕ್ಕೆ ತೊಂದರೆಯಾಗುವ ಆತಂಕವಿದೆ ಎಂದರು. ಅಧಿಕಾರಿಗಳು ಜನರ ಅಭಿಪ್ರಾಯ ಪಡೆಯದೆ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಅಭಿವೃದ್ಧಿ ಬೇಕಿದ್ದರೂ ಸಹ, ಈ ಹಿಂದೆ ನಡೆದ ಕಾಮಗಾರಿಗಳ ಇತಿಹಾಸ ಮತ್ತು ಸ್ಥಳೀಯರ ಆತಂಕಗಳನ್ನು ಪರಿಗಣಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಒಳಿತು ಎಂದು ಅವರು ಅಭಿಪ್ರಾಯಪಟ್ಟರು.
