ಮೈಸೂರು, ಫೆಬ್ರವರಿ 13, 2026 :ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಳೆ ಭಕ್ತಿ ಪರವಶತೆಯ ವಾತಾವರಣ ನಿರ್ಮಾಣವಾಗಲಿದ್ದು, ಮಹಾರಾಜ ಕಾಲೇಜು ಮೈದಾನದಲ್ಲಿ ಸುಮಾರು ಒಂದು ಲಕ್ಷ ಜನರಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ನಡೆಯಲಿದೆ. ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಆಯೋಜಿಸಲಾಗಿರುವ ಈ ಬೃಹತ್ ಕಾರ್ಯಕ್ರಮವು ಶ್ರೀಗಳ ನೇತೃತ್ವದಲ್ಲಿಯೇ ಜರುಗಲಿದೆ. ಲೋಕ ಕಲ್ಯಾಣಾರ್ಥವಾಗಿ ಈ ವೇಳೆ ಮಹಾಯಜ್ಞ ಕೂಡ ಆಯೋಜನೆಯಾಗಿದ್ದು, ಜಾತಿ-ಮತ ಭೇದವಿಲ್ಲದೆ ಯಾರು ಬೇಕಾದರೂ ಈ ಪವಿತ್ರ ಪಾರಾಯಣದಲ್ಲಿ ಭಾಗವಹಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಸಕರಾದ ಶ್ರೀವತ್ಸ ಮತ್ತು ಹರೀಶ್ ಗೌಡ ಅವರು, ಕಾರ್ಯಕ್ರಮಕ್ಕೆ ಬರುವ ಭಕ್ತರಿಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಮೈದಾನದಲ್ಲಿ 75 ಸಾವಿರ ಆಸನಗಳ ವ್ಯವಸ್ಥೆ, ಕುಡಿಯುವ ನೀರು ಹಾಗೂ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಈ ಪಾರಾಯಣದಲ್ಲಿ ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಈ ಬಗ್ಗೆ ಮಾತನಾಡಿದ ಮಾಜಿ ಮೇಯರ್ ಎಂ. ನಾರಾಯಣ್ ಅವರು, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಪೌರ ಕಾರ್ಮಿಕರ ಕಾಲೋನಿಗಳಲ್ಲಿನ 20 ದೇಗುಲಗಳ ಜೀರ್ಣೋದ್ದಾರ ಮಾಡಿದ್ದಾರೆ ಹಾಗೂ 25ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಪೌರೋಹಿತ್ಯದ ತರಬೇತಿ ನೀಡುವ ಮೂಲಕ ಸಮುದಾಯದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರು ಸಿಎಂ ನಾಯಕತ್ವದ ಕುರಿತು ಮಹತ್ವದ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಅವರು ಕೇವಲ ಐದು ವರ್ಷ ಮಾತ್ರವಲ್ಲ, ಮುಂದಿನ ಹತ್ತು ಹದಿನೈದು ವರ್ಷಗಳ ಕಾಲವೂ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ನನ್ನ ಆಸೆ ಎಂದು ತಿಳಿಸಿದರು. ತಮಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್ ಇದ್ದಂತೆ ಮತ್ತು ತಾವು ಇಬ್ಬರ ಪರವಾಗಿಯೂ ಇರುವುದಾಗಿ ಸ್ಪಷ್ಟಪಡಿಸಿದರು.
ಇತ್ತೀಚಿನ ಶಾಸಕರ ವಿದೇಶ ಪ್ರವಾಸದ ಕುರಿತಾದ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, ಶಾಸಕರು ವಿದೇಶಕ್ಕೆ ಹೋಗುವುದು ಹೊಸತೇನಲ್ಲ, ತಾವು ಕೂಡ ಆರು ತಿಂಗಳ ಹಿಂದೆ ಹೋಗಿ ಬಂದಿರುವುದಾಗಿ ತಿಳಿಸಿದರು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದ ಅವರು, ನಾಯಕತ್ವದ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಿಎಂ ಅವರೇ ಹೇಳಿದ್ದಾರೆ. ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲದೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹರೀಶ್ ಗೌಡ ಮೈಸೂರಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
