ಮೈಸೂರು, ಮಾರ್ಚ್ 3, 2026 : ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಹಲವಾರು ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಬಜೆಟ್‌ನಲ್ಲಿ ಈಗಾಗಲೇ ಮೈಸೂರಿಗೆ ರಸ್ತೆಗಳ ವೈಟ್ ಟ್ಯಾಪಿಂಗ್ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳನ್ನು ನೀಡಲಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಆಸ್ಪತ್ರೆಗಳ ಸುಧಾರಣೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಹಾರಾಣಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಲಾಗಿದೆ ಎಂದು ಅವರು ಸ್ಮರಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ನಡುವೆಯೂ ಮುಖ್ಯಮಂತ್ರಿಗಳು ಅಭಿವೃದ್ಧಿ ಪರವಾದ ಬಜೆಟ್ ಮಂಡಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ ಶಾಸಕರು, ಈ ಬಾರಿ ಮೈಸೂರಿನ ಐತಿಹಾಸಿಕ ಕಾರಂಜಿಕೆರೆ ಸೇರಿದಂತೆ ಪ್ರಮುಖ ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ಸಿಗಬೇಕಿದೆ ಎಂದಿದ್ದಾರೆ. ಅದರೊಂದಿಗೆ, ಹಳೆಯ ಜಿಲ್ಲಾಧಿಕಾರಿ ಕಚೇರಿಯಂತಹ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ನಿರ್ಮಾಣ ಹಂತದಲ್ಲಿರುವ ಕಿದ್ವಾಯಿ ಆಸ್ಪತ್ರೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಅಗತ್ಯವಿದ್ದು, ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
