ಬೆಂಗಳೂರು, ಜನವರಿ 5, 2025 : ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧೆಡೆ ತುಂತುರು ಮಳೆ ಹಾಗೂ ಒಣಹವೆಯ ಮಿಶ್ರಿತ ವಾತಾವರಣ ಕಂಡುಬರುತ್ತಿದ್ದು, ವಿಶೇಷವಾಗಿ ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ ಮುಂದುವರಿಯುತ್ತಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇಂದು ಕೂಡ ಒಣಹವೆ ಮುಂದುವರಿಯಲಿದ್ದು, ಬಳ್ಳಾರಿ, ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿ ಸೇರಿದಂತೆ ರಾಜ್ಯದಾದ್ಯಂತ ಮಳೆಯಿಲ್ಲದ ಶುಷ್ಕ ಹವಾಮಾನವಿರಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಮಂಜು ಕವಿದ ವಾತಾವರಣವಿರಲಿದ್ದು, ತಾಪಮಾನವು ಕನಿಷ್ಠ 16°C ನಿಂದ ಗರಿಷ್ಠ 28°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಈ ತೀವ್ರ ಚಳಿಯ ವಾತಾವರಣವು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಆರೋಗ್ಯ ಕಾಪಾಡಿಕೊಳ್ಳಲು ಬೆಚ್ಚಗಿನ ಉಡುಪು ಧರಿಸುವಂತೆ ಮತ್ತು ಬಿಸಿ ಆಹಾರವನ್ನೇ ಸೇವಿಸುವಂತೆ ವೈದ್ಯರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
