ಮೈಸೂರು, ಫೆಬ್ರವರಿ 18, 2026: ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಡೂಪ್ಲಿನ್ ಕಾಂಪ್ಲೆಕ್ಸ್ ಮಳಿಗೆದಾರರನ್ನು ತೆರವುಗೊಳಿಸುವ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (MUDA) ಪೂರಕವಾಗಿ ಗೌರವಾನ್ವಿತ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ ಎಂದು ಎಂಡಿಎ ಆಯುಕ್ತ ರಕ್ಷಿತ್ ಅವರು ತಿಳಿಸಿದ್ದಾರೆ.

ಈ ತೀರ್ಪಿನ ಹಿನ್ನೆಲೆಯಲ್ಲಿ ಡೂಪ್ಲಿನ್ ಕಾಂಪ್ಲೆಕ್ಸ್ ಅನ್ನು ಸಂಪೂರ್ಣವಾಗಿ ಪ್ರಾಧಿಕಾರದ ವಶಕ್ಕೆ ಪಡೆಯಲು ಅಗತ್ಯವಿರುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಾಧಿಕಾರವು ಕಾಂಪ್ಲೆಕ್ಸ್ ಅನ್ನು ತನ್ನ ಸುಪರ್ದಿಗೆ ಪಡೆದ ನಂತರ, ಆ ಆಯಕಟ್ಟಿನ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಈ ಜಾಗವನ್ನು ಪ್ರಮುಖವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಜನಸಾಮಾನ್ಯರ ಅನುಕೂಲಕ್ಕೆ ಪೂರಕವಾಗುವಂತಹ ಯೋಜನೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಆಯುಕ್ತರು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ದಶಕಗಳ ಕಾಲ ನಡೆದ ಕಾನೂನು ಹೋರಾಟದ ನಂತರ ಸಿಕ್ಕಿರುವ ಈ ತೀರ್ಪು ಎಂಡಿಎ ಪಾಲಿಗೆ ಆಸ್ತಿ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ.
