ಚಾಮರಾಜನಗರ , ಆಗಸ್ಟ್ 21, 2025 : ಮಾದಪ್ಪ ಮತ್ತೆ ಕೋಟ್ಯಧಿಪತಿ ಆಗಿದ್ದಾನೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 33 ದಿನಗಳ ಅವಧಿಯಲ್ಲಿ 2.20 ಕೋಟಿ ರೂ. ಸಂಗ್ರಹವಾಗಿದೆ.
ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 8 ಗಂಟೆಯವರೆಗೂ ನಡೆಯಿತು. ಅಂತಿಮವಾಗಿ 2.20ಕೋಟಿ ಹಣ ಸಂಗ್ರಹಣೆ ಆಗಿರೋ ಕುರಿತು ಮಾಹಿತಿ ಲಭ್ಯವಾಗಿದೆ.
ಸರ್ಕಾರಿ ರಜಾ ದಿನ, ಅಮಾವಾಸ್ಯೆ ಜಾತ್ರಾ ಮಹೋತ್ಸವ ಸೇರಿದಂತೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ 2,20,22,454 ರೂ. ನಗದು, 55 ಗ್ರಾಂ ಚಿನ್ನ ಹಾಗೂ 1627 ಕೆಜಿ ಬೆಳ್ಳಿ ಪದಾರ್ಥಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ.
ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ನಾಮನಿರ್ದೇಶಿತ ಸದಸ್ಯರುಗಳಾದ ಮರಿಸ್ವಾಮಿ, ಲೆಕ್ಕಪತ್ರ ಸಲಹೆಗಾರ ಮಹದೇವ್, ಲೆಕ್ಕಾಧಿಕ್ಷಕರಾದ ಗುರುಮಲ್ಲಯ್ಯ, ಪ್ರಾಧಿಕಾರದ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಸಮಂತ್ ಕುಮಾರ್, ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು, ಪೊಲೀಸ್ ಅಧಿಕಾರಿಗಳು, ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.