ಮೈಸೂರು, ಜನವರಿ 6, 2026 : ಕರ್ನಾಟಕದ ಮುಖ್ಯಮಂತ್ರಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ಅಪರೂಪದ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದು, ಈ ಸಂಭ್ರಮವನ್ನು ಅವರ ತವರು ಜಿಲ್ಲೆ ಮೈಸೂರಿನಲ್ಲಿ ಅಭಿಮಾನಿಗಳು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದಾರೆ.
ಮೈಸೂರಿನ ಟಿ. ಕೆ. ಬಡಾವಣೆಯಲ್ಲಿರುವ ಸಿದ್ದರಾಮಯ್ಯನವರ ನಿವಾಸದ ಮುಂಭಾಗ ಇಂದು ಬೆಳಿಗ್ಗೆಯಿಂದಲೇ ಅಭಿಮಾನಿಗಳ ದಂಡು ಜಮಾಯಿಸಿದ್ದು, ಮುಖ್ಯಮಂತ್ರಿಗಳ ಭಾವಚಿತ್ರ ಹಾಗೂ ಬಾವುಟಗಳನ್ನು ಹಿಡಿದು ಜಯಘೋಷಗಳನ್ನು ಕೂಗುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ಅವರು ಹೊಸ ದಾಖಲೆ ನಿರ್ಮಿಸಿದ ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಹಾಗೂ ಅಭಿಮಾನಿಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ನಿಮಿತ್ತ ಸಾರ್ವಜನಿಕರಿಗೆ ಸಿಹಿ ಹಂಚುವುದರ ಜೊತೆಗೆ ಬಿಸಿಬಿಸಿ ಚಿಕನ್ ಬಿರಿಯಾನಿಯನ್ನು ವಿತರಿಸುವ ಮೂಲಕ ಸಂಭ್ರಮಿಸಲಾಯಿತು. ಇದೇ ವೇಳೆ ಅಭಿಮಾನಿಗಳು ಸಿದ್ದರಾಮಯ್ಯನವರ ಪರವಾಗಿ ಘೋಷಣೆಗಳನ್ನು ಕೂಗುತ್ತಾ, ಈಗಿನ ಅವಧಿಯ ಮುಂದಿನ ಎರಡೂವರೆ ವರ್ಷಗಳ ಕಾಲವೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಆಶಯ ಮತ್ತು ಆಗ್ರಹವನ್ನು ವ್ಯಕ್ತಪಡಿಸಿದರು.
