ಮೈಸೂರು, ನವೆಂಬರ್ 5, 2025 : ಮೈಸೂರು ನಗರದ ಜೆಎಲ್‌ಬಿ ರಸ್ತೆ ಮತ್ತು ವಿನೋಬ ರಸ್ತೆಗಳಲ್ಲಿ ಉದ್ದೇಶಿತ ಎರಡು ಫ್ಲೈ ಓವರ್‌ಗಳ ನಿರ್ಮಾಣಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರಸ್ತೆಗಳು ಪಾರಂಪರಿಕ ರಸ್ತೆಗಳಾಗಿರುವುದರಿಂದ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಜನರ ಅಭಿಪ್ರಾಯ ಪಡೆಯದೇ ಡಿಪಿಆರ್ ಸಿದ್ಧಪಡಿಸಿ ಫ್ಲೈ ಓವರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿನೋಬ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಿಸಿದರೆ ಮರಗಳ ಹನನವಾಗಲಿದೆ.ಅಭಿವೃದ್ಧಿಯ ನೆಪದಲ್ಲಿ ಮೈಸೂರಿನ ಪಾರಂಪರಿಕ ನಗರಿಯ ಗುರುತು ಮತ್ತು ಸೌಂದರ್ಯ ಹಾಳು ಮಾಡಬಾರದು.ಗ್ರೇಟರ್ ಮೈಸೂರು ಸಭೆಯಲ್ಲಿ ಮುಖ್ಯಮಂತ್ರಿಗಳು ಮೈಸೂರಿನ ಪಾರಂಪರಿಕತೆಯನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸಿಎಂ ಸಲಹೆಯಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಸಂಸದರು ಎಚ್ಚರಿಕೆ ನೀಡಿದ್ದು, ಜನರ ವಿರೋಧದ ನಡುವೆಯೂ ಕಾಮಗಾರಿ ಕೈಗೆತ್ತಿಕೊಂಡರೆ, ಕಾನೂನಾತ್ಮಕ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ, ಜನರ ಸಹಕಾರದೊಂದಿಗೆ ಹೋರಾಟ ರೂಪಿಸುವುದಾಗಿಯೂ ಹೇಳಿದ್ದಾರೆ.
ಫ್ಲೈ ಓವರ್ ನಿರ್ಮಾಣ ಶಾಶ್ವತ ಪರಿಹಾರವಲ್ಲ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ. ಮುಂಬೈ ಮಾದರಿಯಲ್ಲಿ ಅಂಡರ್‌ಗ್ರೌಂಡ್‌ನಲ್ಲಿ ಮೆಟ್ರೋ ನಿರ್ಮಾಣ ಮಾಡಲಿ. ಮೈಸೂರಿನ ಜನಸಂಖ್ಯೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಬೇಕು. ಗ್ರೇಟರ್ ಮೈಸೂರಿನಿಂದ ಒಳಿತಾಗಲಿದೆ. ಆದರೆ, ಅದನ್ನು ಪೂರ್ವ ತಯಾರಿ ಮಾಡಿಕೊಂಡು, ಸ್ಥಳೀಯರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಬೆಂಗಳೂರು ಮಾದರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಬಾರದು ಎಂದು ಹೇಳಿದರು.
ಬೆಳಗಾವಿ ರೈತರ ಪ್ರತಿಭಟನೆ: ರಾಜ್ಯ ಸರ್ಕಾರದ ಕರ್ತವ್ಯ
ಬೆಳಗಾವಿಯಲ್ಲಿ ರೈತರು ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ನಡೆಸುತ್ತಿರುವ ಪ್ರತಿಭಟನೆಯ ಕುರಿತು ಮಾತನಾಡಿದ ಸಂಸದರು, ಇದು ರಾಜ್ಯ ಸರ್ಕಾರದ ಕರ್ತವ್ಯವಾಗಿದ್ದು, ರೈತರ ಮನವಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯನವರು ಏನೇ ಆದರೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಅದನ್ನು ಬಿಟ್ಟು, ರೈತರ ಸಮಸ್ಯೆ ಬಗೆಹರಿಸಲಿ ಎಂದು ಟೀಕಿಸಿದರು.
ಹುಲಿ ದಾಳಿ ಹೆಚ್ಚಳ: ಶಾಶ್ವತ ಪರಿಹಾರಕ್ಕೆ ಒತ್ತಾಯ
ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ದಾಳಿ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಅರಣ್ಯ ಇಲಾಖೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ದತ್ತಾಂಶಗಳನ್ನು ಪರಿಶೀಲಿಸಿ, ಅರಣ್ಯದಲ್ಲಿರುವ ಹುಲಿಗಳ ಸಂಖ್ಯೆ ನೋಡಬೇಕು ಎಂದರು. ಕಾಡಂಚಿನಲ್ಲಿ ಮನುಷ್ಯನ ಅತಿಯಾದ ಹಸ್ತಕ್ಷೇಪ ತಪ್ಪಬೇಕು. ಮನುಷ್ಯ ಪ್ರಕೃತಿಗೆ ಕೈ ಹಾಕುವುದು ಬೇಡ.ಇತ್ತೀಚೆಗೆ ಹುಲಿಗಳ ಸಂಖ್ಯೆ ಹೆಚ್ಚಿರುವುದರಿಂದ ಕಾಡಿನಿಂದ ಹೊರ ಬರುತ್ತಿವೆ. ರೆಸಾರ್ಟ್‌ಗಳು, ಸಫಾರಿ ಸಮಯ ಹೆಚ್ಚಳದಿಂದ ಹುಲಿ ದಾಳಿ ಹೆಚ್ಚುತ್ತಿಲ್ಲ. ಅರಣ್ಯದಲ್ಲಿ ಲಂಟಾನ ಯಥೇಚ್ಛವಾಗಿ ಬೆಳೆದಿರುವುದರಿಂದ ಜಿಂಕೆ, ಸಾಂಬರ್‌ನಂತಹ ಸಸ್ಯಾಹಾರಿ ಪ್ರಾಣಿಗಳು ಆಹಾರ ಹುಡುಕುತ್ತಾ ಹೊರಬರುತ್ತಿವೆ. ಇವುಗಳನ್ನು ಬೇಟೆಯಾಡಲು ಹುಲಿಗಳು ಕಾಡಿನಿಂದ ಹೊರ ಬರುತ್ತಿವೆ.
ಈ ಬಗ್ಗೆ ಸಮಗ್ರ ಅಧ್ಯಯನವಾಗಬೇಕು. ಜನರಿಗೆ ತೊಂದರೆಯಾಗದಂತೆ ಶಾಶ್ವತ ಪರಿಹಾರಕ್ಕೆ ಉತ್ತಮ ಯೋಜನೆ ರೂಪಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನಲ್ಲಿ ಹೇಳಿಕೆ ನೀಡಿದರು.
