ಮೈಸೂರು, ಫೆಬ್ರವರಿ 12, 2026: ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿ ನೆಲೆಸಿರುವ ಪುಣ್ಯಕ್ಷೇತ್ರ ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ನಡೆಸಲಾಗುತ್ತಿರುವ ಅವೈಜ್ಞಾನಿಕ ಕಾಮಗಾರಿಗಳಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಈ ಕುರಿತು ‘ಪ್ರತಿನಿಧಿ ನ್ಯೂಸ್’ ಜೊತೆ ಮಾತನಾಡಿರುವ ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ಅವರು, ಬೆಟ್ಟದ ನೈಸರ್ಗಿಕ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಚಾಮುಂಡಿ ಬೆಟ್ಟವು ಕೇವಲ ಪ್ರವಾಸಿ ತಾಣವಲ್ಲ, ಅದಕ್ಕೊಂದು ವಿಶೇಷವಾದ ಧಾರ್ಮಿಕ ಮಹತ್ವ ಹಾಗೂ ಪಾವಿತ್ರ್ಯತೆಯಿದೆ. ಅಭಿವೃದ್ಧಿಯ ನೆಪದಲ್ಲಿ ಇಲ್ಲಿ ನಡೆಸಲಾಗುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು ಬೆಟ್ಟದ ಪರಿಸರಕ್ಕೆ ಮಾತ್ರವಲ್ಲದೆ, ಪವಿತ್ರವಾದ ಚಾಮುಂಡೇಶ್ವರಿ ದೇಗುಲದ ಅಸ್ತಿತ್ವಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಬೆಟ್ಟದ ಪಾವಿತ್ರ್ಯತೆಗೆ ಧಕ್ಕೆ ತರುವವರಿಗೆ ತಾಯಿ ಚಾಮುಂಡೇಶ್ವರಿಯ ಶಾಪ ತಟ್ಟಲಿದೆ ಎಂದು ಎಚ್ಚರಿಸಿರುವ ಮುಖಂಡರು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಬೆಟ್ಟದ ಪರಿಸರ ಹಾಗೂ ಪಾವಿತ್ರ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕೂಡಲೇ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಬೆಟ್ಟದ ಅಳಿವು-ಉಳಿವಿನ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿದ್ದಾರೆ.
