ಮೈಸೂರು, ನವೆಂಬರ್ 4, 2025 : ಖ್ಯಾತ ನಟ ಶಿವರಾಜಕುಮಾರ್ ಅವರು ರೆಸಾರ್ಟ್ ಒಂದಕ್ಕೆ ಪ್ರಚಾರ ನೀಡುತ್ತಿರುವ ಕುರಿತು ಮೈಸೂರಿನಲ್ಲಿ ವಕೀಲ ರವಿಕುಮಾರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಿವರಾಜಕುಮಾರ್ ಅವರ ತಂದೆ, ದಿ. ಡಾ. ರಾಜ್‌ಕುಮಾರ್ ಅವರು ‘ಗಂಧದ ಗುಡಿ’ಯಂತಹ ಅಮರ ಚಿತ್ರಗಳನ್ನು ನಿರ್ಮಿಸಿ ಕಾಡು ಮತ್ತು ಪರಿಸರವನ್ನು ಉಳಿಸುವಂತೆ ನಾಡಿನ ಜನತೆಗೆ ಮನವಿ ಮಾಡಿದರು. ಆದರೆ, ಅವರ ಪುತ್ರರಾದ ಶಿವರಾಜಕುಮಾರ್ ಅವರು ಅಕ್ರಮ ರೆಸಾರ್ಟ್ ಒಂದಕ್ಕೆ ಪ್ರಮೋಷನ್ ಮಾಡುತ್ತಿರುವುದು ವಿಷಾದನೀಯ ಎಂದು ವಕೀಲ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಸರಕ್ಕೆ ಹಾನಿಯಾಗುವಂತಹ ಅಥವಾ ಅಕ್ರಮ ರೆಸಾರ್ಟ್‌ಗಳಿಗೆ ನಟ ಶಿವರಾಜಕುಮಾರ್ ಅವರು ಪ್ರಚಾರ ನೀಡುತ್ತಿರುವುದಕ್ಕೆ ನಮ್ಮ ವಿರೋಧವಿದೆ. ತಕ್ಷಣವೇ ಅವರು ಈ ಪ್ರಚಾರದಿಂದ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೇವಲ ಶಿವರಾಜಕುಮಾರ್ ಮಾತ್ರವಲ್ಲ, ಸಾಕಷ್ಟು ಸಿನಿಮಾ ನಟರು ಕೂಡ ರೆಸಾರ್ಟ್ ವ್ಯವಹಾರದಲ್ಲಿ ತೊಡಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ನಟರು ಈ ರೀತಿಯ ಪರಿಸರ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದಕ್ಕೆ ನಮ್ಮ ವಿರೋಧವಿದೆ ಎಂದು ರವಿಕುಮಾರ್ ಹೇಳಿದ್ದಾರೆ. ಸಿನಿಮಾ ನಟರು ಸಮಾಜದಲ್ಲಿ ದೊಡ್ಡ ಪ್ರಭಾವಿ ಸ್ಥಾನದಲ್ಲಿದ್ದಾರೆ. ಅವರು ಹಣಕ್ಕಾಗಿ ಪ್ರಕೃತಿ ವಿರೋಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಬಾರದು. ಬದಲಿಗೆ, ಪರಿಸರ ಸಂರಕ್ಷಣೆಯ ಪರವಾಗಿ ನಿಲ್ಲಬೇಕು ಎಂದು ಅವರು ಒತ್ತಾಯಿಸಿದ್ದಾರೆ.
